ಮೂಲತ: ಮಲಯಾಳಂ ಹುಡುಗಿಯಾದರೂ ನಿತ್ಯಾ ಮೆನನ್ ಕನ್ನಡಿಗರಿಗೆ ಒಳ್ಳೆಯ ಪರಿಚಯ. 'ಸೆವೆನ್ ಓ ಕ್ಲಾಕ್' ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಕರಿಯರ್ ಆರಂಭಿಸಿದ ಈ ಮುದ್ದು ಮುಖದ ಚೆಲುವೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇಂದು ನಿತ್ಯಾ ಹುಟ್ಟಿದ ದಿನ. ಮಲಯಾಳಂ ದಂಪತಿಗೆ 1988 ಏಪ್ರಿಲ್ 8ರಂದು ಬೆಂಗಳೂರಲ್ಲಿ ನಿತ್ಯಾ ಜನಿಸಿದರು. ಮಣಿಪಾಲ್ ವಿವಿಯಲ್ಲಿ ಜರ್ನಲಿಸಂ ಓದಿದ ನಿತ್ಯಾಗೆ ಪತ್ರಕರ್ತೆಯಾಗುವ ಕನಸಿತ್ತಂತೆ. ಆದರೆ 10 ವರ್ಷದವರಿದ್ದಾಗಲೇ ಬಾಲನಟಿಯಾಗಿ ಇಂಡಿಯನ್ ಇಂಗ್ಲಿಷ್ ಸಿನಿಮಾದಲ್ಲಿ ನಟಿಸಿದ್ದ ನಿತ್ಯಾರನ್ನು ಚಿತ್ರರಂಗ ಕೂಡಾ ಸೆಳೆದ ಕಾರಣ ಪುಣೆಯಲ್ಲಿ ಸಿನಿಮಾಟೋಗ್ರಫಿ ಕಲಿತರು. ಸಂತೋಷ್ ರೈ ಪಾತಾಜೆ ನಿರ್ದೇಶನದಲ್ಲಿ ಕನ್ನಡದ 'ಸೆವೆನ್ ಓ ಕ್ಲಾಕ್' ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸುವ ಮೂಲಕ ನಿತ್ಯಾ ಸ್ಯಾಂಡಲ್ವುಡ್ಗೆ ಕಾಲಿಟ್ಟರು.
ನಂತರ ಜೋಶ್, ಐದೊಂದ್ಲ ಐದು, ಮೈನಾ, ಕೋಟಿಗೊಬ್ಬ 2, ಪ್ರಾಣ ಹಾಗೂ ಇನ್ನಿತರ ಕನ್ನಡ ಸಿನಿಮಾಗಳಲ್ಲಿ ನಿತ್ಯಾ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ಮಲಯಾಳಂ, ತೆಲುಗು, ತಮಿಳು ಸಿನಿಮಾ ಪ್ರೇಕ್ಷಕರಿಗೂ ನಿತ್ಯಾ ಪರಿಚಿತೆ. ನಿತ್ಯಾ ನಟಿ ಮಾತ್ರವಲ್ಲ ಉತ್ತಮ ಗಾಯಕಿ ಕೂಡಾ. ಇವರ ನಟನೆ ಹಾಗೂ ಅವರು ಹಾಡಿದ ತೆಲುಗಿನ 'ಅಲಾ ಮೊದಲಾಯಿಂದಿ' ಸಿನಿಮಾದ ಹಾಡಿಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ.
ಸದ್ಯಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೀವನಚರಿತ್ರೆ ಸಿನಿಮಾದಲ್ಲಿ ನಿತ್ಯಾ ಜಯಲಲಿತಾ ಪಾತ್ರ ಮಾಡುತ್ತಿದ್ದಾರೆ. ಅಲ್ಲದೆ ಅಕ್ಷಯ್ ಕುಮಾರ್ ಜೊತೆ ನಟಿಸುವ ಮೂಲಕ ಬಾಲಿವುಡ್ಗೆ ಕೂಡಾ ನಿತ್ಯಾ ಇತ್ತೀಚೆಗೆ ಕಾಲಿಟ್ಟಿದ್ದಾರೆ. ಈಟಿವಿ ಭಾರತ ವತಿಯಿಂದ ನಿತ್ಯಾಗೆ ಹುಟ್ಟುಹಬ್ಬದ ಶುಭಾಶಯ.