ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೇವಲ ರಾಜಕಾರಣಿ ಮಾತ್ರವಲ್ಲದೇ, ಒಬ್ಬ ಯಶಸ್ವಿ ಸಿನಿಮಾ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರೋದು ಗೊತ್ತಿರುವ ವಿಚಾರ. ಹೆಚ್. ಡಿ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಸಂಸ್ಥೆ ಅಂದಾಕ್ಷಣ ಎಲ್ಲರಿಗೂ ನೆನಪಿಗೆ ಬರೋದು ಚೆನ್ನಾಂಬಿಕ ಫಿಲ್ಮ್ಸ್. ಈ ಸಂಸ್ಥೆಯಡಿ ಸೂರ್ಯವಂಶ, ಗಲಾಟೆ ಅಳಿಯಂದ್ರು, ಚಂದ್ರ ಚಕೋರಿ, ಪ್ರೇಮೋತ್ಸವ ಹಾಗು ಜಾಗ್ವಾರ್ ಸಿನಿಮಾಗಳನ್ನ ನಿರ್ಮಾಣ ಮಾಡಿರೋ ಖ್ಯಾತಿ ಚೆನ್ನಾಂಬಿಕಾ ಫಿಲ್ಸ್ಮ್ ನಿರ್ಮಾಣ ಸಂಸ್ಥೆಗೆ ಸಲ್ಲುತ್ತೆ.
ಇದೀಗ ಹೆಚ್ ಡಿ ಕುಮಾರಸ್ವಾಮಿ ಮನೆಯಲ್ಲಿ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆ ತಲೆ ಎತ್ತುತ್ತಿದೆ. ಚೆನ್ನಾಂಬಿಕ ಫಿಲ್ಸ್ಮ್ ಸಂಸ್ಥೆ ಇರಬೇಕಾದರೆ, ಮತ್ತೊಂದು ನಿರ್ಮಾಣ ಸಂಸ್ಥೆ ಯಾಕೆ ಮಾಡ್ತಾ ಇದ್ದಾರೆ ಅಂತಾ ಅನ್ಕೊಂಡಿದ್ದೀರಾ ಅಲ್ವಾ? ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ, ಹೊಸ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕುತ್ತಿರುವುದು ಹೆಚ್ ಡಿ ಕೆ ಸುಪುತ್ರ ನಿಖಿಲ್ ಕುಮಾರಸ್ವಾಮಿ.
NK ಹೆಸರಿನಡಿ ಪ್ರೊಡಕ್ಷನ್ ಹೌಸ್ ತೆರೆಯೋದಿಕ್ಕೆ ಮುಂದಾದ ಯುವರಾಜ ಹೌದು, ಈ ಮಾತನ್ನ ಸ್ವತಃ ನಿಖಿಲ್ ಕುಮಾರಸ್ವಾಮಿ ತಮ್ಮ ರೈಡರ್ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅನೌನ್ಸ್ ಮಾಡಿದ್ದಾರೆ. ಎನ್ಕೆ ಹೆಸರಿನಡಿ ಪ್ರೊಡಕ್ಷನ್ ಹೌಸ್ ಸ್ಟಾರ್ಟ್ ಮಾಡಲಿದ್ದೇನೆ ಅಂತಾ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಸಾಕಷ್ಟು ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಬರ್ತಾ ಇರೋ ನಿರ್ದೇಶಕರಿಗೆ ಹಾಗು ಯುವ ನಟರು ಹಾಗು ತಂತ್ರಜ್ಞರಿಗಾಗಿ ನಾನು ಎನ್ ಕೆ ಹೆಸರಲ್ಲಿ ನಿರ್ಮಾಣ ಸಂಸ್ಥೆ ಕಟ್ಟಲಿದ್ದೇನೆ ಎಂದು ಸಂತಸದ ವಿಷಯ ಹಂಚಿಕೊಂಡಿದ್ದಾರೆ.
NK ನಿರ್ಮಾಣ ಸಂಸ್ಥೆಯಡಿ ನಿಖಿಲ್ ಕುಮಾರಸ್ವಾಮಿ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಈಗಾಗಲೇ ಹೆಚ್ ಡಿ ಕುಮಾರಸ್ವಾಮಿ ನಿರ್ಮಾಪಕರಾಗಿ, ವಿತರಕರಾಗಿ ಹಾಗು ಪ್ರದರ್ಶಕರಾಗಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನ ಕಂಡಿದ್ದಾರೆ.
ಈಗ ತಂದೆಯ ಹಾದಿಯಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ನಡೆಯಲು ಮುಂದಾಗಿದ್ದಾರೆ. ಈಗಾಗಲೇ ರಾಜಕಾರಣಿ ಹಾಗು ಸಿನಿಮಾ ನಟನಾಗಿ ಸಾವಿರಾರು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರೋ ನಿಖಿಲ್ ಕುಮಾರಸ್ವಾಮಿ ಈಗ ನಿರ್ಮಾಪಕರಾಗಲು ರೆಡಿಯಾಗಿದ್ದಾರೆ.