ಮುಂಬೈ : ಸಂಗೀತಗಾರ ನಿಕ್ ಜೋನಸ್ ತಂದೆಯಂದಿರ ದಿನ ತನ್ನ ತಂದೆ ಪಾಲ್ ಕೆವಿನ್ ಜೋನಸ್ ಅವರಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಪತ್ನಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರ ತಂದೆ ದಿವಂಗತ ಅಶೋಕ್ ಚೋಪ್ರಾ ಅವರಿಗೆ ಅತ್ಯಮೂಲ್ಯ ಮಗಳನ್ನು ಬೆಳೆಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ.
ತನ್ನ ತಂದೆ ಮತ್ತು ಪ್ರಿಯಾಂಕ ಚೋಪ್ರಾ ಬಾಲ್ಯದಲ್ಲಿ ತಂದೆಯೊಂದಿಗೆ ತೆಗೆದಿದ್ದ ಫೋಟೋವನ್ನು ಇನ್ಸ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ನಿಕ್ ಜೋನಸ್, ಎಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು. ನನ್ನ ತಂದೆ ನನ್ನ ಹೀರೋ..ಲವ್ ಮಿಸ್ ಯು ಅಂತ ಬರೆದುಕೊಂಡಿದ್ದಾರೆ.
ಅಲ್ಲದೇ, ಡಾ. ಅಶೋಕ್ ಚೋಪ್ರಾ, ನಾನು ನಿಮ್ಮನ್ನು ಭೇಟಿಯಾಗಲು ಅವಕಾಶ ಸಿಗಬಹುದೆಂದು ಬಯಸುತ್ತೇನೆ. ನೀವು ಒಬ್ಬ ಒಳ್ಳೆ ಮಗಳನ್ನು ಬೆಳೆಸಿದ್ದೀರಿ. ನಾವು ಒಬ್ಬರಿಗೊಬ್ಬರು ಜೊತೆಯಾಗಿರುವುದರಿಂದ ನಾನು ತುಂಬಾ ಆರ್ಶೀವದಿತನಾಗಿದ್ದೇನೆ. ಪ್ರತಿಯೊಬ್ಬರಿಗೂ ಅವರ ತಂದೆಯ ಜೊತೆ ಇರಲು ಸಾಧ್ಯವಿಲ್ಲ. ಸಾಧ್ಯವಿದ್ದಾಗ ನಾನು ನಿಮ್ಮ ಬಗ್ಗೆ ಯೋಚಿಸುತ್ತೇನೆ. ಇಂದು ನಾನು ನಿಮಗೆ ಪ್ರೀತಿಯನ್ನು ಕಳುಹಿಸುತ್ತೇನೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ಮಾರ್ಕ್ ರುಫಲೋ, ಕ್ರಿಸ್ ಇವಾನ್ಸ್, ಗಿಗಿ ಹ್ಯಾಡಿಡ್ ಸೇರಿದಂತೆ ಇತರ ಸ್ಟಾರ್ಗಳು ಕೂಡ ಫಾದರ್ಸ್ ಡೇ ಗೆ ಶುಭಕೋರಿದ್ದಾರೆ.