ಹುಟ್ಟು ಉಚಿತ, ಸಾವು ಖಚಿತ ಎಂಬ ಮಾತು ಬಹುಶಃ ಕನ್ನಡ ಚಿತ್ರರಂಗಕ್ಕೆ ಅನ್ವಯ ಆಗುತ್ತೆ. ವಯಸ್ಸಲ್ಲದ ವಯಸ್ಸಿನಲ್ಲಿ ಈ ಸಾವು ಬಂದು ಪ್ರಾಣ ಪಕ್ಷಿಯನ್ನ ಕಸಿದುಕೊಂಡು ಹೋಗುತ್ತೆ. ಈ ಸತ್ಯ ಈಗ ಕನ್ನಡ ಚಿತ್ರರಂಗದಲ್ಲಿ ನಿಜವಾಗಿದೆ.
ಹೌದು, ಕನ್ನಡ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ಮೂವರು ಮಾಣಿಕ್ಯಗಳು, ಚಿಕ್ಕವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸುವ ಮೂಲಕ ತಮ್ಮ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿ ವರ್ಗವನ್ನ ಅಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಡಿಮೆ ವಯಸ್ಸಿನಲ್ಲಿ ಸಾವನ್ನಪ್ಪಿದ ಮೂರು ಮಾಣಿಕ್ಯಗಳ ಇಂಟ್ರಸ್ಟ್ರಿಂಗ್ ಸ್ಟೋರಿ ಇಲ್ಲಿದೆ.
ಈ ಸಾಲಿನಲ್ಲಿ ಮೊದಲಿಗೆ ಬರುವವರು ಕಳೆದ ಎರಡು ದಿನದ ಹಿಂದೆಯಷ್ಟೇ ಅಕಾಲಿಕ ಮರಣ ಹೊಂದಿದ ನಟ ಚಿರಂಜೀವಿ ಸರ್ಜಾ. ಚಿರು 2009ರಲ್ಲಿ 'ವಾಯುಪುತ್ರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ ಚಿರಂಜೀವಿ, ಬರೋಬ್ಬರಿ 22 ಸಿನಿಮಾಗಳನ್ನ ಮಾಡಿ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಅಂತಾ ಕರೆಯಿಸಿಕೊಂಡಿದ್ರು. ಅಷ್ಟೇ ಅಲ್ಲ ಚಿರಂಜೀವಿ ಸರ್ಜಾ, ಅಂದುಕೊಂಡಂತೆ ಇಷ್ಟದ ಹುಡುಗಿ ಮೇಘನಾ ರಾಜ್ ಜೊತೆ ಮದುವೆ ಕೂಡ ಆದ್ರು. ಇನ್ನೇನು ವಿಭಿನ್ನ ಕಥೆಯ ಸಿನಿಮಾಗಳನ್ನ ಮಾಡಿ, ಸಿನಿಮಾ ಪ್ರೇಕ್ಷಕರನ್ನ ರಂಜಿಸಿ, ದೊಡ್ಡಮಟ್ಟದಲ್ಲಿ ಸ್ಟಾರ್ ನಟನಾಗಿ ಬೆಳೆಯುವ ಟೈಮಲ್ಲಿ ಚಿರಂಜೀವಿ ಸರ್ಜಾ ಕೇವಲ, 39ನೇ ವಯಸ್ಸಿಗೆ ತಮ್ಮ ಬದುಕಿನ ಪಯಣ ಮುಗಿಸಿದ್ರು. ಆ ವಿಧಿಯಾಟಕ್ಕೆ ಚಿರಂಜೀವಿ ಸರ್ಜಾ ಎಂಬ ವಾಯುಪುತ್ರನನ್ನ ಕುಟುಂಬದವರು ಹಾಗೂ ಕನ್ನಡ ಚಿತ್ರರಂಗ ಕಳೆದುಕೊಂಡಿದೆ.
ಚಿತ್ರರಂಗದಲ್ಲಿ ಚಿರಂಜೀವಿ ಸರ್ಜಾ ನಂತರ, ಭಾರತೀಯ ಚಿತ್ರರಂಗ ಕಂಡ ಮಾಣಿಕ್ಯ ಅಂದರೆ ಕರಾಟೆ ಕಿಂಗ್ ಶಂಕರ್ ನಾಗ್. ಹೌದು ಹೆಸರಲ್ಲೇ ಒಂದು ಶಕ್ತಿ ಹೊಂದಿದ್ದ ಶಂಕರ್ ನಾಗ್ ಕೂಡ ತೀರಾ ಚಿಕ್ಕವಯಸ್ಸಿನಲ್ಲೇ ಕನ್ನಡ ಚಿತ್ರರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಕನ್ನಡದವರ ಆಟೋ ರಾಜ ಎಂದೇ ಖ್ಯಾತಿ ಗಳಿಸಿದ್ರು.
'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಂಕರ್ ನಾಗ್, ಮುಂದೆ ಒಂದು ದಿನ ನಿರ್ದೇಶಕನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತೇನೆ ಅಂತಾ ಸ್ವತಃ ಅವರೇ ಅಂದುಕೊಂಡಿರಲಿಲ್ಲ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ತಂತ್ರಜ್ಞನಾಗಿ ಕನ್ನಡ ಸಿನಿಮಾವನ್ನ ಆಳಿದವರು ನಟ ನಾಗರಕಟ್ಟೆ ಶಂಕರ್ ನಾಗ್.