ಚಂದನವನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಿಂಚಿ ಮರೆಯಾದವರು ಹಲವರು. ಅಂತಹ ಅದ್ಭುತ ಪ್ರತಿಭೆಗಳ ಸಾಲಿಗೆ ಸೇರುವ ಶಂಕರ್ ನಾಗ್ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದ ‘ಉತ್ಸವ’ ಎಂಬ ಸಿನಿಮಾದಲ್ಲಿ ನೀನಾ ಗುಪ್ತಾ ಜೊತೆ ಸಹನಟನಾಗಿ ಶಂಕರ್ ನಾಗ್ ಕೂಡ ಅಭಿನಯಿಸಿದ್ದರು.
ಉತ್ಸವ ಸಿನಿಮಾದಲ್ಲಿ ಶಂಕರ್ ನಾಗ್ ಜತೆ ನಿಂತಿರುವ ಸ್ಟಿಲ್ ಒಂದನ್ನು ಬಾಲಿವುಡ್ ನಟಿ ನೀನಾ ಗುಪ್ತಾ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶಂಕರ್ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ’ ಎಂದು ಅವರು ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ.