ಕರ್ನಾಟಕ

karnataka

ETV Bharat / sitara

ಡ್ರಗ್ಸ್​ ಪ್ರಕರಣ: ಪ್ರಬಲವಾಗಿ ವಾದ ಮಂಡಿಸಿದ ಸಿಸಿಬಿ, ನಟಿ ಮಣಿಯರಿಗೆ ಜೈಲೇ ಗತಿ - ಎನ್​​ಡಿಪಿಎಸ್​ ವಿಶೇಷ ನ್ಯಾಯಾಲಯ

ಮಾದಕ ಜಾಲದಲ್ಲಿ ಸಿಲುಕಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಎನ್​​ಡಿಪಿಎಸ್​ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಮೊದಲು ನಡೆದ ರಾಗಿಣಿ ಜಾಮೀನು ಅರ್ಜಿ ವಿಚಾರಣಾ ನಂತರ ಸಿಸಿಬಿಯು ಸಂಜನಾ ಅರ್ಜಿ ವಿಚಾರಣೆಗೆ ಸಮಯಾವಕಾಶ ಕೇಳಿದ ಹಿನ್ನೆಲೆ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಲಾಯಿತು.

ndps-special-court-hearing-actress-ragini-and-sanjana-bail-application
ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ

By

Published : Sep 21, 2020, 5:29 PM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣ ಸಂಬಂಧ ಇಂದು ಸಿಟಿ ಸಿವಿಲ್ ಆವರಣದಲ್ಲಿರುವ ಎನ್​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ನಟಿಯರಾದ ರಾಗಿಣಿ ಹಾಗೂ ನಟಿ ಸಂಜನಾರ ಅರ್ಜಿ ವಿಚಾರಣೆ ನಡೆಯಿತು.

ಮೊದಲು ನಟಿ ರಾಗಿಣಿ ಅರ್ಜಿ ವಿಚಾರಣೆ ನಡೆದಿದ್ದು, ಅವರ ಪರ ವಕೀಲರು ಜಾಮೀನು ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಈ ವೇಳೆ ಸಿಸಿಬಿ ಪರ ವಕೀಲರು ನಟಿ ರಾಗಿಣಿ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಿ, ಪ್ರಕರಣದಲ್ಲಿ ರಾಗಿಣಿ ದ್ವಿವೇದಿಯ ಪಾತ್ರವೇನು ಅನ್ನೋದ್ರ ಬಗ್ಗೆ ಮಾಹಿತಿ ನೀಡಿ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ರಾಗಿಣಿ ಪರ ವಕೀಲರ ವಾದ ಮಂಡನೆ

ಇದೇ ವೇಳೆ ರಾಗಿಣಿ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಎಫ್​ಐಆರ್ ದಾಖಲಾಗುವ ಮುನ್ನವೇ ತನಿಖೆ ಶುರುವಾಗಿದೆ. ರಾಗಿಣಿ ಬಂಧನದ ವೇಳೆ ಕಾನೂನು ನಿಯಮ ಪಾಲಿಸಿಲ್ಲ. ಅವರ ಮನೆಯಲ್ಲಿ ಕೇವಲ ಸಿಗರೇಟ್ ಸ್ಟ್ರಿಪ್ ಮಾತ್ರ ಸಿಕ್ಕಿದೆ. ಆದರೆ ಗಾಂಜಾ ಸಿಕ್ಕಿದೆ ಎಂದು ಪೊಲೀಸರು ಕಾನೂನನ್ನ ದುರುಪಯೋಗ ಪಡಿಸಿಕೊಂಡು, ಒಳ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ರಾಗಿಣಿ ಡ್ರಗ್ಸ್​ ಮಾತ್ರೆ ತಗೊಂಡಿದ್ದಾರೆಂದು ಮತ್ತೊಬ್ಬ ಆರೋಪಿಯ ಹೇಳಿಕೆಯ ಮೇರೆಗೆ ಈ ಆರೋಪ ಮಾಡಿದ್ದಾರೆ. ಹಾಗೆಯೇ ರಾಗಿಣಿ ತನಿಖೆಗೆ ಸಹಕಾರ ನೀಡಿಲ್ಲವೆಂದು ಹೇಳಿ ಯಾರನ್ನೋ ಹಿಡಿಯಲು ಹೋಗಿ ರಾಗಿಣಿಯನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ‌. ರಾಗಿಣಿ ಕುಟುಂಬ ಸೇನಾ ಕುಟುಂಬದವರು. ಕೊರೊನಾ ಟೈಂಲ್ಲಿ ಜನರಿಗೋಸ್ಕರ ಕೆಲಸ ಮಾಡಿದ್ದಾರೆ. ಹಾಗೆ ಸಿಸಿಬಿ ಪೊಲೀಸರ ಸಮ್ಮುಖದಲ್ಲಿ ಸಮಾಜಮುಖಿ ಕೆಲಸವನ್ನೂ ಕೂಡ ಮಾಡಿದ್ದಾರೆ ಎಂದರು.

4 ಜನ ಆರೋಪಿಗಳು ರಾಗಿಣಿ ಜೊತೆ ಸೇರಿ ಡ್ರಗ್ಸ್​​​ ಮಾತ್ರೆ ಸೇವನೆ ಮಾಡಿದ್ದಾರೆಂದು ಹೇಳ್ತಾರೆ. ಆದರೆ ನಾವು ಇದನ್ನ ನಿರಾಕರಿಸುತ್ತೇವೆ. ಸಿಸಿಬಿ ಪ್ರಕಾರ ಇದು ಸಣ್ಣ ಕೇಸ್, ಆದರೆ ಬೇಕಂತಲೇ ನಟಿಯಾದ ಕಾರಣ ಡ್ರಗ್ಸ್​ ಕೇಸ್ ಹಾಕಿದ್ದಾರೆ. ಹಾಗೆ ಜಾಮೀನು ಕೊಡಬಾರದೆಂದು ಹೇಳ್ತಿದ್ದಾರೆ ಎಂದು ವಾದ ಮಂಡನೆ ಮಾಡಿದರು.

ಸಿಸಿಬಿ ಪರ ವಕೀಲರು ಹೇಳಿದ್ದೇನು..?

ಇನ್ನು, ನಟಿ ರಾಗಿಣಿ ಪರ ವಕೀಲರ ವಾದಕ್ಕೆ ಸಿಸಿಬಿ ಪರ ಎಸ್​ಪಿಪಿ ಆಕ್ಷೇಪಣೆ ಸಲ್ಲಿಕೆ ಮಾಡಿ ಕಳೆದ 5 ವರ್ಷದಿಂದ ಬಂಧಿತ ಆರೋಪಿಗಳ ಜೊತೆ ಪಾರ್ಟಿ ಮಾಡಿದ್ದಾರೆ. ರಾಗಿಣಿ ಜೊತೆ ಸಂಪರ್ಕ ಇರುವ ಕೆಲ ಪ್ರಮುಖ ಆರೋಪಿಗಳು ಸಿಕ್ಕಿಲ್ಲ. ಆಂಧ್ರ ಪ್ರದೇಶ, ಗೋವಾ ಜತೆಗೆ ವಿದೇಶದಿಂದ ಡ್ರಗ್ಸ್ ತಂದಿದ್ದಾರೆ. ಬಂಧಿಸಿ ಕರೆತಂದಾಗ ಮೊಬೈಲ್ ಜಪ್ತಿ ಮಾಡಿದ ನಂತ್ರ ಪಾಸ್ ವರ್ಡ್ ನೀಡಿಲ್ಲ. ಟೆಕ್ನಿಕಲ್ ಸಹಾಯದಿಂದ‌ ನಾವು ಓಪನ್ ಮಾಡಿದ್ದಿವಿ. ಹಾಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಾಗ ಮೂತ್ರಕ್ಕೆ ನೀರು ಬೆರೆಸಿದ್ದಾರೆ.

ಹಾಗೆ ಪ್ರಕರಣದಲ್ಲಿ ಭಾಗಿಯಾದ ಕೆಲವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ರಾಗಿಣಿ ಹೇಳಿದ ವ್ಯಕ್ತಿಗಳನ್ನ ಬಂಧಿಸಬೇಕು. ಕೆಲವರು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಆಗಿದ್ದಾರೆ. 5ವರ್ಷ ಭಾಗಿಯಾದ ಪಾರ್ಟಿಯಲ್ಲಿ ರಾಗಿಣಿನೇ ಡ್ರಗ್ಸ್​ ಸರಬರಾಜು ಮಾಡಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು, ಜಾಮೀನು ನೀಡಿದರೆ ತಲೆಮರೆಸಿಕೊಳ್ತಾರೆ. 7ನೇ ಆರೋಪಿಯೊಂದಿಗೆ ನೇರ ಸಂಪರ್ಕ ಹೊಂದಿ ಡ್ರಗ್ಸ್​ ಸರಬರಾಜು ಮಾಡಿದ್ದಾರೆ. ರಾಗಿಣಿಗೆ ಶ್ರೀಮಂತ ಮಕ್ಕಳು, ರಾಜಕಾರಣಿಗಳ ಜೊತೆ ಸಂಪರ್ಕ ಇದೆ ಎಂದರು.

ರಾಗಿಣಿ ಹಿರೋಯಿನ್ ಆದರೆ ಯಾಕೆ ಆರೋಪಿಗಳ ಜೊತೆ ಸಂಪರ್ಕ ಇರಬೇಕು. ತನ್ನ ಕರಾಳ ಮುಖ ಮುಚ್ಚಿಡಲು ರಾಜಾಕೀಯ ಪಕ್ಷದ ಜೊತೆ ಭಾಗಿಯಾಗಿದ್ರು. ರಾಗಿಣಿ ಡ್ರಗ್ಸ್ ನಿಂದ ಬಂದ ಹಣದಿಂದ ಆಸ್ತಿ ಖರೀದಿಸಿದ್ದಾರೆ. ಹಾಗೆ ನಟಿ ರಾಗಿಣಿ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಬೇಕಾದ ಸಾಕ್ಷ್ಯಗಳು ಸಿಕ್ಕಿವೆ. ವಾಟ್ಸಪ್, ಕಾಲ್, ಇಮೇಲ್​ನ ಮಾಹಿತಿ ತನಿಖಾಧಿಕಾರಿಗಳ ಕೈಯಲ್ಲಿದೆ. ಈ ಪ್ರಕರಣದಲ್ಲಿ 20ವರ್ಷ ಶಿಕ್ಷೆಯಾಗಬಹುದು. ಹೀಗಾಗಿ ಜಾಮೀನು ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ. ಹಾಗೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿಯನ್ನ ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.

ಸಂಜನಾ ಅರ್ಜಿ ವಿಚಾರಣೆ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ

ನಟಿ ರಾಗಿಣಿಯ ಅರ್ಜಿ ವಿಚಾರ ಇಂದು ವಾದ ಪ್ರತಿವಾದ ನಡೆದ ಕಾರಣ ನಟಿ ಸಂಜನಾರ ಅರ್ಜಿ ವಿಚಾರಣೆ ಆಕ್ಷೇಪಣೆಗೆ ಸಿಸಿಬಿ ಅಧಿಕಾರಿಗಳು ಸಮಯಾವಕಾಶ ಕೇಳಿದರು. ಹೀಗಾಗಿ ಜಾಮೀನು ಅರ್ಜಿ ವಿಚಾರಣೆಯನ್ನ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ಸಂಜನಾಗೆ ಮತ್ತೆ ಜೈಲೇ ಗತಿಯಾಗಿದೆ. ಸೆ. 24ರಂದು ಸಂಜನಾ ಪರ ವಕೀಲರು ಹಾಗೂ ಸಿಸಿಬಿ ಪರ ಎಸ್ ಪಿ.ಪಿ ವಾದ ಪ್ರತಿವಾದಗಳನ್ನ ಮಾಡಲಿದ್ದಾರೆ‌. ಸದ್ಯ ನಟಿ ಮಣಿಯರಿಬ್ಬರಿಗೆ ಮೂರು ದಿನಗಳ ಕಾಲ ಜೈಲಲ್ಲೇ ಇರಬೇಕಾಗಿದೆ. ಹಾಗೆ ಇವರ ಆಪ್ತರು ಸಲ್ಲಿಸಿದ ಅರ್ಜಿ 24ಕ್ಕೆ ಮುಂದೂಡಿಕೆಯಾಗಿದೆ.

ABOUT THE AUTHOR

...view details