ಬಿಚ್ಚುಗತ್ತಿ ಚಿತ್ರದ ನಂತರ ನಟ ರಾಜವರ್ಧನ್ ಸದ್ದಿಲ್ಲದೇ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಇತ್ತು. ಪಿ2 ಪ್ರೊಡಕ್ಷನ್ಸ್ನಡಿ ಪ್ರೇಮ್ ಮತ್ತು ಪರಮೇಶ್ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಕೆಲವು ದಿನಗಳ ಕಾಲ ಚಿತ್ರೀಕರಣ ಸಹ ಆಗಿ, ಲಾಕ್ಡೌನ್ನಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಪರಭಾಷೆ ನಟಿ ನೈನಾ ಗಂಗೂಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಐದು ವರ್ಷಗಳ ಹಿಂದೆ ಬಿಡುಗಡೆಯಾದ ರಾಮ್ಗೋಪಾಲ್ ವರ್ಮಾ ನಿರ್ದೇಶನದ ತೆಲುಗು ಚಿತ್ರ ವಂಗವೀಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನೈನಾ ಗಂಗೂಲಿ, ಆ ನಂತರ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ಮೂಲತಃ ಬಂಗಾಳಿ ನಟಿಯಾದ ನೈನಾ ಕೆಲವು ಚಿತ್ರಗಳಲ್ಲಿ ಮತ್ತು ವೆಬ್ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಆರ್ಜಿವಿ ನಿರ್ದೇಶನದ ಬ್ಯೂಟಿಫುಲ್: ಏನ್ ಓಡ್ ಟು ರಂಗೀಲಾ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ನಂತರ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.