ಕರ್ನಾಟಕ

karnataka

ETV Bharat / sitara

ನಿತ್ಯೋತ್ಸವ ಕವಿ ನಿಸಾರ್ ಅಹಮದ್​ರನ್ನು ಅಕ್ಷರಗಳಲ್ಲಿ ನೆನೆದ ನಾಗೇಂದ್ರ ಪ್ರಸಾದ್! - Nisar Ahmed

ಪ್ರೊ. ನಿಸಾರ್ ಅಹಮದ್ ಅವರನ್ನು ನೆನೆದು ಕವಿ, ಸಂಗೀತ ನಿರ್ದೇಶಕ, ನಟ ಡಾ ವಿ ನಾಗೇಂದ್ರ ಪ್ರಸಾದ್ ಅಕ್ಷರ ರೂಪದಲ್ಲಿ ನನೆದು ಭಾವನಾತ್ಮಕ ವಿದಾಯ ಹೇಳಿದ್ದಾರೆ.

Nagendra Prasad remembers the poet Nisar Ahmed
ನಾಗೇಂದ್ರ ಪ್ರಸಾದ್!

By

Published : May 4, 2020, 9:11 AM IST

ಕನ್ನಡ ಸಿನಿಮಾ ಕ್ಷೇತ್ರಕ್ಕೆ ನಿಸಾರ್ ಅಹಮದ್ ಅವರ ಕೊಡುಗೆ ಅನನ್ಯ. ಅವರು ‘ನಿತ್ಯೋತ್ಸವ’ ಕವಿ ಆಗಿ ಅನೇಕ ಯುವ ಪೀಳಿಗೆ ಬರಹಗಾರರಿಗೆ ಸ್ಪೂರ್ತಿಯಾದರು.

ಪ್ರೊ. ನಿಸಾರ್ ಅಹಮದ್ ಅವರನ್ನು ನೆನೆದು ಕವಿ, ಸಂಗೀತ ನಿರ್ದೇಶಕ, ನಟ ಡಾ ವಿ ನಾಗೇಂದ್ರ ಪ್ರಸಾದ್ ಹೀಗೆ ಹೇಳುತ್ತಾರೆ...

ನನ್ನ ಕಾಲೇಜಿನ ದಿನಗಳಲ್ಲಿ ಭಾವಗೀತೆಯ ಹುಚ್ಚು ಹಿಡಿದಿತ್ತು. ಪಿ.ಕಾಳಿಂಗರಾವ್ ಅವರಿಂದ ಹಿಡಿದು ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್ ಮುಂತಾದ ಎಲ್ಲಾ ತಲೆಮಾರಿನ ಭಾವಗೀತ ಸಂಗೀತ ನಿರ್ದೇಶಕರು ನನ್ನ ಮನಸಿಗೆ ಬಹಳ ಹತ್ತಿರಾಗಿದ್ದರು.ಕುವೆಂಪು ಅವರಿಂದ ಹಿಡಿದು ಬಿ.ಆರ್.ಲಕ್ಷಣರಾವ್ ಅವರ ತನಕ ಎಲ್ಲ ಕವಿಗಳೂ ನನ್ನ ಭಾವಕೋಶವನ್ನು ವಿಸ್ತೃತಗೊಳಿಸುವಲ್ಲಿ ಮಹೋಪಕಾರಿಗಳಾಗಿದ್ದರು.ಅಂತಹ ಪ್ರಾತಃಸ್ಮರಣೀಯರಲ್ಲಿ ನಿಸಾರರೂ ಒಬ್ಬರು.

ಅವರ ಪದ್ಯಗಳನ್ನು ಓದಿದೆ.. ಅಂತರಾರ್ಥಗಳನ್ನು ಗ್ರಹಿಸುವ ಪ್ರಯತ್ನ ಮಾಡಿದೆ.ಅವರೇ ಒಂದು ಪದ್ಯವಾಗಿ, ಪಾಠವಾಗಿ ನನ್ನೊಳಗೆ ಅಚ್ಚಳಿಯದೇ ಉಳಿದುಬಿಟ್ಟರು.ಅಭಿಮಾನದಲೋಹದದಿರ ಉತ್ತುಂಗದ ಶಿಖರದಲ್ಲಿ ಕುಳಿತುಬಿಟ್ಟರು. ಕುರಿಗಳು ಸಾರ್ ನಾವ್ ಕುರಿಗಳು ಎಂಬ ಬಿರುಬಿಸಿನಲ್ಲಿ, ಮತ್ತದೇ ಸಂಜೆ ಎಂಬ ವಿಷಾದದ ಮತ್ತಿನಲ್ಲಿ, ಇತಿಹಾಸದ ಹಿಮದ ನಿತ್ಯೋತ್ಸವದಲ್ಲಿ, ರಂಗೋಲಿಯ ಜಿಜ್ಞಾಸೆಯಲ್ಲಿ ಅವರು ನನ್ನನ್ನು ಅರಳಿಸಿದರು.. ಹೊರಳಿಸಿದರು.

ನಿತ್ಯೋತ್ಸವ ಕವಿ ನಿಸಾರ್ ಅಹಮದ್​ರ

ಈಗ್ಗೆ ಕೆಲವು ವರ್ಷಗಳ ಹಿಂದೆ ವೇದಿಕೆ ಹಂಚಿಕೊಂಡೆ.ಅದಾಗಲೇ ಅವರು ವಿರಾಜಮಾನರಾಗಿದ್ದರು.ನಾನು ಹೋದೊಡನೆ ಯಾವುದೋ ಜನ್ಮದ ಬಂಧುವೆಂಬಂತೆ ನನ್ನನ್ನು ಪಕ್ಕದಲ್ಲಿ ಕರೆದು ಕೂರಿಸಿಕೊಂಡು "ಬಹಳ ಚೆನ್ನಾಗಿ ಬರೀತಿರಿ. ನಿಮ್ಮ ಕೆಲವು ಹಾಡುಗಳನ್ನು ಕೇಳಿದೆ" ಅಂದರು. ಅವರೇ ನನ್ನನ್ನು ಸನ್ಮಾನಿಸಿದರು. ಆ ಹೊತ್ತಿನ ರೋಮಾಂಚನ ಇಂದಿಗೂ ಜಾರಿಯಲ್ಲಿದೆ.ಕಲ್ಪದಂತಹಾ ಪ್ರತಿಭಾಶಾಲಿಯ ಎದುರು ನಾನು ಅಲ್ಪ.ಅವರ ಅನನ್ಯ ಪ್ರೀತಿಯಿಂದ ನನ್ನ ಜನ್ಮ ಧನ್ಯ.

ನಿತ್ಯೋತ್ಸವ ಕವಿ ನಿಸಾರ್ ಅಹಮದ್​ರ

ಗುರುಗಳೇ,ಕನ್ನಡನಾಡಿಗೆ ನಿಮ್ಮ ಮಾರ್ಗದರ್ಶನದ ಕೊರತೆ ಎದ್ದುಕಾಣಲಿದೆ.ನನ್ನಂತಹ ಸಹಸ್ರಾರು ಅಭಿಮಾನಿಗಳಿಗೆ ನಿಮ್ಮ ಪದ್ಯಗಳು ಕಾಲಕಾಲಕ್ಕೂ ಕಾಡಲಿವೆ.ನಿಮ್ಮ ವಿನಯ ನಮಗೂ ಬರಲಿ. ನಿಮ್ಮ ಹೃದಯವಂತಿಕೆ ನಮಗೂ ಇರಲಿ.ಎಂದು ಆಶೀರ್ವದಿಸಿ.ಹೋಗಿ ಬನ್ನಿ .. ಕನ್ನಡ ಇರುವವರೆಗೂ ನೀವು ಇದ್ದೇ ಇರುತ್ತೀರಿ. ಮತ್ತದೇ ಸಂಜೆ ಮತ್ತದೇ ಬೇಸರ. ವಿದಾಯ.

ಧನ್ಯವಾದಗಳು

ವಿ ನಾಗೇಂದ್ರ ಪ್ರಸಾದ್

ABOUT THE AUTHOR

...view details