ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ, ಆರ್ಥಿಕ ಸಹಾಯ ಮಾಡಿ ಎಂದು ಮನವಿ ಮಾಡಿರುವ ಮತ್ತೊಂದು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.
ಇನ್ಮುಂದೆ ಚಿತ್ರರಂಗದ ಸಹಾಯ ಬೇಡುವುದಿಲ್ಲ: ನಟಿ ವಿಜಯಲಕ್ಷ್ಮಿ - ನಟಿ ವಿಜಯಲಕ್ಷ್ಮಿ
ಹಣದ ಸಹಾಯ ಮಾಡಿ ಎಂದು ಇಷ್ಟು ದಿನ ಚಿತ್ರರಂಗದ ಸಹಾಯ ಕೇಳಿದ್ದ ನಟಿ ವಿಜಯಲಕ್ಷ್ಮಿ ಇನ್ನು ಮುಂದೆ ಹಣಕ್ಕಾಗಿ ಚಿತ್ರರಂಗದಿಂದ ಯಾರ ಸಹಾಯವೂ ಕೇಳುವುದಿಲ್ಲ. ಅದರ ಬದಲಿಗೆ ಅಭಿಮಾನಿಗಳ ಬಳಿಯೇ ಸಹಾಯ ಕೇಳುತ್ತೇನೆ ಎಂದು ಹೇಳಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮಿ, ಮತ್ತೊಂದು ಶಸ್ತ್ರಚಿಕಿತ್ಸೆಗಾಗಿ ದುಡ್ಡು ಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. 'ಮೀಡಿಯಾದವರೆಲ್ಲರಿಗೂ ನಮಸ್ಕಾರ. ನಿಮ್ಮ ಸಹಾಯದಿಂದ 3-4 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕಷ್ಟ ದಾಟಿಕೊಂಡು ಬಂದಿದ್ದೀನಿ. ಆದರೆ, ಈಗ ತಕ್ಷಣ ಒಂದು ಆಪರೇಶನ್ ಮಾಡಬೇಕಿದೆ. ಇದು ಬಹಳ ಕ್ರಿಟಿಕಲ್ ಆಗಿದೆ. ಸರ್ಜರಿಗಾಗಿ 2 ಲಕ್ಷ ರೂಪಾಯಿ ಖರ್ಚಾಗುತ್ತದೆ. ಪ್ರತಿ ಬಾರಿ ನಾನು ವಿಡಿಯೋ ಮಾಡಿ ರಿಲೀಸ್ ಮಾಡುತ್ತಿರುವುದಕ್ಕೆ ಎಲ್ಲರೂ ನನ್ನನ್ನು ಟೀಕಿಸುತ್ತಿದ್ದಾರೆ. ಸುದೀಪ್ ಅವರಿಂದ 1 ಲಕ್ಷ ರೂಪಾಯಿ ಬಿಟ್ಟರೆ ಬೇರೆ ಯಾರಿದಂಲೂ ನನಗೆ ಸಹಾಯ ದೊರೆತಿಲ್ಲ. ಇನ್ನು ಮುಂದೆ ನಾನು ಚಿತ್ರರಂಗದವರ ಬಳಿ ಸಹಾಯ ಬೇಡುವುದಿಲ್ಲ.
ನೋವಿನಿಂದ ದಿನೇ ದಿನೆ ನನ್ನ ಪರಿಸ್ಥಿತಿ ಹದಗೆಡುತ್ತಿದೆ. ನಾನು ನೋವು ಪಡಬಾರದು ಎನ್ನುವ ಅಭಿಮಾನಿಗಳೂ ಇರುತ್ತಾರೆ. ಅಭಿಮಾನಿಗಳು ನನಗೆ ಹಣದ ಸಹಾಯ ಮಾಡಿ. ನನಗೂ ವಿಡಿಯೋ ಮಾಡಿ ಸಾಕಾಗಿದೆ. ಆದರೆ ವಿಡಿಯೋ ಮಾಡದಿದ್ದರೆ ನನಗೆ ಇಷ್ಟು ಸಹಾಯ ಕೂಡಾ ಸಿಗುತ್ತಿರಲಿಲ್ಲ. ನೀವೆಲ್ಲಾ ನನ್ನೊಂದಿಗೆ ಇರುತ್ತೀರ ಎಂಬ ಒಂದೇ ಒಂದು ನಂಬಿಕೆಯಿಂದ ನಾನು ಇದ್ದೇನೆ. ನನಗೆ ಬೇರೆ ಯಾರ ಬೆಂಬಲವೂ ಇಲ್ಲ. ಸಾಧ್ಯವಾದಷ್ಟು ಸಹಾಯ ಮಾಡಿ. ಆಪರೇಶನ್ ಆದ ನಂತರ ನಿಮ್ಮನ್ನೆಲ್ಲಾ ಬಂದು ಭೇಟಿ ಮಾಡುತ್ತೇನೆ. ಇದು ನನ್ನ ಸೀರಿಯಸ್ ರಿಕ್ವೆಸ್ಟ್ ಎಂದು ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.