ಕನ್ನಡ ಚಿತ್ರರಂಗದಲ್ಲಿ ಈಗ ಸಾಕಷ್ಟು ಹೊಸ ಅಲೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಆ ಚಿತ್ರಗಳ ಸಾಲಿಗೆ ಹೊಸದಾಗಿ 'ಮೈಲಾಪುರ' ಎಂಬ ಸಿನಿಮಾ ಕೂಡಾ ಸೇರಿದೆ. ಫಣೀಶ್ ಭಾರಧ್ವಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕರ್ನಾಟಕದ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹಾಗೂ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಖ್ಯಾತಿಯ ನಾಗೇಂದ್ರ ಅವರ ಪತ್ನಿ ಜಯಲಕ್ಷ್ಮಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅಪ್ಪು ಯೂಥ್ ಬ್ರಿಗೇಡ್‍ನ ಮುರಳೀಧರ್, ಲೇಡೀಸ್ ಕ್ಲಬ್‍ನ ಶುಭಾ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಅಂತರಿಕ್ಷ ವಿ 'ಮೈಲಾಪುರ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಿಯಾಲಿಟಿ ಶೋ ಹಿನ್ನೆಲೆಯಲ್ಲಿ ನಡೆಯುವ ಕಥಾನಕ ಈ ಸಿನಿಮಾದಲ್ಲಿದೆ. "ಈ ಸಿನಿಮಾ ಮಾಡುವಾಗ ಅನೇಕ ಅಡೆತಡೆಗಳು ಎದುರಾದವು. ಸಾಮಾನ್ಯ ಕಥೆಯೊಂದಿಗೆ ಸಿನಿಮಾ ಮಾಡುವುದಕ್ಕಿಂತ ರಿಯಾಲಿಟಿ ಶೋ ಹಿನ್ನೆಲೆ ಇರುವ ಕಥೆಯನ್ನು ಬಳಸಿಕೊಳ್ಳಲು ನಿರ್ಧಾರ ಮಾಡಿದೆವು. ಚಿತ್ರದಲ್ಲಿ ರಿಯಾಲಿಟಿ ಟಾಸ್ಕ್ ಜೊತೆಗೆ ಹಾರರ್ ಅಂಶ ಕೂಡಾ ಇದೆ. ಇದರಲ್ಲಿ ಪಾಲ್ಗೊಳ್ಳಲು ಬರುವ ಎಲ್ಲರಿಗೂ ಅವರದ್ದೇ ಆದ ಕನಸುಗಳಿರುತ್ತವೆ. ಅದಕ್ಕಾಗಿ ಅವರೆಲ್ಲಾ ರಿಯಾಲಿಟಿ ಷೋನಲ್ಲಿ ಭಾಗವಹಿಸುತ್ತಾರೆ. ಅಮ್ಮ ಮಗಳ ಕಥೆಯೂ ಚಿತ್ರದಲ್ಲಿದೆ. ಅಲ್ಲಿ ಬರುವ ಊರೇ ಮೈಲಾಪುರ. ಬೇಲೂರು, ಮಂಗಳೂರು, ಬೆಂಗಳೂರು ಹಾಗೂ ಮಂಡ್ಯ ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆಸಿದ್ದೇವೆ. ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಾಗ ನಾಯಕಿ ತನಗೆ ಗೊತ್ತಿಲ್ಲದೆ ಮೈಲಾಪುರವನ್ನು ಆಯ್ಕೆ ಮಾಡಿಕೊಂಡಿರುತ್ತಾಳೆ. ಅಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು" ಎಂದು ನಿರ್ದೇಶಕ ಫಣೀಶ್ ವಿವರಿಸಿದರು.