ಹೈದರಾಬಾದ್ :ತಮ್ಮ ಬಯೋಪಿಕ್ ವಿವಾದದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ತನ್ನ ಪಾತ್ರದಿಂದ ಹಿಂದೆ ಸರಿಯುವಂತೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ತಮಿಳು ನಟ ವಿಜಯ್ ಸೇತುಪತಿಗೆ ಸಲಹೆ ನೀಡಿದ್ದಾರೆ.
ಮುರಳೀಧರನ್ ಕತೆಯಾಧಾರಿತ ಚಿತ್ರದಿಂದ ವಿಜಯ್ ಸೇತುಪತಿ ಅವರ ವೃತ್ತಿ ಜೀವನಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು, ಇದರಿಂದಾಗಿ ಚಲನಚಿತ್ರದಿಂದ ಹೊರಗುಳಿಯುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಮುತ್ತಯ್ಯ ಮುರಳೀಧರನ್ ಪತ್ರ ಬರೆದಿದ್ದು, ಪತ್ರವನ್ನು ಟ್ವೀಟರ್ನಲ್ಲಿ ಹಂಚಿಕೊಂಡು ಪೋಸ್ಟ್ ಮಾಡಿರುವ ವಿಜಯ್ ಸೇತುಪತಿ 'ನಂದ್ರಿ ವಣಕ್ಕಂ' (ಧನ್ಯವಾದಗಳು) ಎಂದು ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿತ್ರದಿಂದ ದೂರ ಇರುವುದಾಗಿ ಘೋಷಿಸಿದ್ದಾರೆ.
ವಿಜಯ್ ಸೇತುಪತಿ ಅವರ ಈ ನಿರ್ಧಾರಕ್ಕೆ ಸಂಸದ ತೋಲ್ ತಿರುಮವಲವನ್ ಹಾಗೂ ಹಲವು ತಮಿಳು ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಮೊದಲಿನಿಂದಲೂ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಾರೆ ಎಂಬ ಆಸೆಯಲ್ಲಿದ್ದ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ 800 ಇತ್ತೀಚೆಗೆ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇದಾದ ನಂತರ ಮುರಳೀಧರನ್ ಶ್ರೀಲಂಕಾ ಪರ ಎಂದು ಕೆಲವು ತಮಿಳು ನಾಯಕರು ಧನಿಯೆತ್ತಿದ ಕಾರಣದಿಂದ ವಿಜಯ್ ಸೇತುಪತಿಯನ್ನು ಈ ಸಿನಿಮಾದಿಂದ ಹೊರಗುಳಿಯುವಂತೆ ಒತ್ತಡಗಳೂ ಹೆಚ್ಚಾದವು.
ಸದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಹೆಡ್ಕೋಚ್ ಆಗಿರುವ ಮುತ್ತಯ್ಯ ಮುರಳೀಧರನ್ ಯುಎಇಯಲ್ಲಿದ್ದು ವಿಜಯ್ ಸೇತುಪತಿಗೆ ಪತ್ರ ಬರೆದು, ಚಿತ್ರದಿಂದ ಹೊರಗುಳಿಯುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ಸೇತುಪತಿ ಟ್ವೀಟ್ ಮಾಡಿದ್ದು, ಮುರಳೀಧರನ್ ನಿರ್ಧಾರಕ್ಕೆ ಸಹಮತ ಸೂಚಿಸಿದ್ದಾರೆ.