ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಇಂದು ತಮ್ಮ 67 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 1951 ಜೂನ್ 23 ರಂದು ಮಂಡ್ಯದಲ್ಲಿ ಜನಿಸಿದ ಹಂಸಲೇಖ ಮೊದಲ ಹೆಸರು ಗೋವಿಂದರಾಜು ಗಂಗರಾಜು. ಓದು ಮುಗಿಸಿ ತಂದೆಯ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸಕ್ಕೆ ಸೇರಿದ ಗೋವಿಂದರಾಜು ಆಗಾಗ್ಗೆ ಕವನಗಳನ್ನು ಬರೆಯುತ್ತಿದ್ದರು. ಅದೇ ವೇಳೆ ಅಣ್ಣನ ಆರ್ಕೆಸ್ಟ್ರಾ ತಂಡಕ್ಕೂ ಸೇರಿದರು. ತಮ್ಮ ಗುರುಗಳಾದ ಲಾವಣಿ ನೀಲಕಂಠಪ್ಪ ನೀಡಿದ 'ಸ್ವಾನ್' (ಹಂಸ) ಕಂಪನಿಯ ಲೇಖನಿಯಿಂದ ಕವಿತೆಗಳನ್ನು ಬರೆಯುತ್ತಿದ್ದರಿಂದ ಸ್ವತ: 'ಹಂಸಲೇಖನಿ' ಎಂದು ಹೆಸರು ಬದಲಿಸಿಕೊಂಡರು. ಕೆಲವು ದಿನಗಳ ನಂತರ ಅವರ ಗುರುಗಳು ಆ ಹೆಸರನ್ನು 'ಹಂಸಲೇಖ' ಎಂದು ಬದಲಿಸಿದರು. ಅಂದಿನಿಂದ ಇಂದಿನಿವರೆಗೂ ಗೋವಿಂದರಾಜು ಹಂಸಲೇಖ ಆಗಿಯೇ ಸಂಗೀತ ಪ್ರೇಮಿಗಳ ಮನಸಲ್ಲಿ ನೆಲೆಸಿದ್ದಾರೆ.
ಹಂಸಲೇಖಗೆ ಹುಟ್ಟುಹಬ್ಬದ ಸಂಭ್ರಮ: 'ನಾದಬ್ರಹ್ಮ'ನಿಗೆ ಶುಭಾಶಯಗಳ ಸುರಿಮಳೆ - undefined
'ಪ್ರೇಮಲೋಕ' ಸಿನಿಮಾದ ಹಾಡುಗಳನ್ನು ಕೇಳಿದೊಡನೆ ನಮಗೆ ನೆನಪಾಗುವುದು ಸಂಗೀತ ನಿರ್ದೇಶಕ ಹಂಸಲೇಖ. ಆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ನಾದಬ್ರಹ್ಮನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
1985 ರಲ್ಲಿ ಬಿಡುಗಡೆಯಾದ ರವಿಚಂದ್ರನ್ ಅಭಿನಯದ 'ನಾನು ನನ್ನ ಹೆಂಡ್ತಿ' ಸಿನಿಮಾಗೆ ಸಂಭಾಷಣೆಕಾರ ಹಾಗೂ ಗೀತಸಾಹಿತಿ ಆಗಿ ಅವರು ಸಿನಿಮಾ ಕರಿಯರ್ ಆರಂಭಿಸಿದರು. 1987 ರಲ್ಲಿ ಬಿಡುಗಡೆಯಾದ 'ಪ್ರೇಮಲೋಕ' ಸಿನಿಮಾ ಅವರಿಗೆ ಖ್ಯಾತಿ ತಂದುಕೊಟ್ಟಿತು. ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ಕೂಡಾ ಗಾಯಕಿ. ದಂಪತಿಗೆ ಅಲಂಕಾರ್ ಎಂಬ ಪುತ್ರ ತೇಜಸ್ವಿನಿ ಹಾಗೂ ನಂದಿನಿ ಎಂಬ ಇಬ್ಬರು ಪುತ್ರಿಯರಿದ್ದಾರೆ. 'ಸ್ಪರ್ಶ', 'ಆಕಸ್ಮಿಕ' , 'ಹಾಲುಂಡ ತವರು', 'ನಾನು ನನ್ನ ಕನಸು', 'ರಸಿಕ', 'ಗಟ್ಟಿಮೇಳ', 'ರಾಜಾಹುಲಿ' 'ಗಾನಯೋಗಿ ಪಂಚಾಕ್ಷರಿ ಗವಾಯಿ' ಸೇರಿ ಬಹಳಷ್ಟು ಸಿನಿಮಾದ ಹಾಡುಗಳಿಗೆ ಹಂಸಲೇಖ ಸಂಗೀತ ನೀಡಿದ್ದಾರೆ. 'ಶ್ರೀ ಮಂಜುನಾಥ', 'ಹಾಲುಂಡ ತವರು' ಸೇರಿ ಬಹಳಷ್ಟು ಸಿನಿಮಾದ ಹಾಡುಗಳಿಗೆ ಸಾಹಿತ್ಯ ಕೂಡಾ ರಚಿಸಿದ್ದಾರೆ. ಹಂಸಲೇಖ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಕೂಡಾ ಲಭಿಸಿದೆ.
ಸದ್ಯಕ್ಕೆ ಹಂಸಲೇಖ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟ್ಲ್ ಚಾಂಪ್ ಕಾರ್ಯಕ್ರಮದಲ್ಲಿ ಪ್ರಮುಖ ಜಡ್ಜ್ ಆಗಿದ್ದಾರೆ. ಸರಿಗಮಪ ವೇದಿಕೆಯಲ್ಲಿ ನಾದಬ್ರಹ್ಮನ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಪುನೀತ್ ರಾಜ್ಕುಮಾರ್, ರಮೇಶ್ ಅರವಿಂದ್, ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಿತಿ ನಾಗೇಂದ್ರ ಪ್ರಸಾದ್, ಹಿರಿಯ ಗಾಯಕಿ ಚಿತ್ರ, ವಿಜಯ್ ರಾಘವೇಂದ್ರ ಹಾಗೂ ಇನ್ನಿತರರು ಹಂಸಲೇಖ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.