ರಾಜ್ಯದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಸೋಂಕಿತರ ಸಂಖ್ಯೆ 25 ಸಾವಿರ ಗಡಿ ದಾಟಿದೆ. ಬೆಂಗಳೂರಂತೂ ಕೊರೊನಾ ಹಾಟ್ಸ್ಪಾಟ್ ಆಗಿಹೋಗಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರು ದಿನನಿತ್ಯ ಕೇಳಿಬರುತ್ತಿದೆ. ಅಷ್ಟೇ ಅಲ್ಲ ವೈದರ ಕೊರತೆ ಕೂಡಾ ಇದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ವೈದ್ಯರು, ನರ್ಸ್ಗಳು ಒಪ್ಪುತ್ತಿಲ್ಲ ಎನ್ನಲಾಗಿದೆ. ಈ ಸಂಕಷ್ಟದ ನಡುವೆ ಸ್ಯಾಂಡಲ್ವುಡ್ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು, ಕೀಬೋರ್ಡ್ ಬಿಟ್ಟು ಸ್ಟೆತಸ್ಕೋಪ್ ಹಿಡಿದ್ದಾರೆ.
ರೋಗಿಗಳ ಸೇವೆಗೆ ನಿಂತ ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲು ಉಪೇಂದ್ರ, ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಕಿರಣ್ ತೋಟಂಬೈಲು ಈಗ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಕಿರಣ್ ಮೂಲತ: ವೈದ್ಯರು. ಅದರೊಂದಿಗೆ ಅವರಿಗೆ ಸಂಗೀತದಲ್ಲಿ ಹೆಚ್ಚು ಆಸಕ್ತಿ. ಈ ಕಾರಣದಿಂದ ವೈದ್ಯ ವೃತ್ತಿ ಜೊತೆ ಜೊತೆಗೆ ಅವರು ಸಿನಿಮಾ ಸಂಗೀತ ನಿರ್ದೇಶನ ಕೂಡಾ ಮಾಡುತ್ತಿದ್ದರು. ಕಿರಣ್ ಕೈಯ್ಯಲ್ಲಿ ಈಗ ಸಾಲು ಸಾಲು ಚಿತ್ರಗಳಿವೆ. ಆದರೆ ಈಗ ಸಿನಿಮಾಗಿಂತ ಹೆಚ್ಚಾಗಿ ಕೊರೊನಾ ರೋಗಿಗಳಿಗೆ ವೈದ್ಯರ ಅಗತ್ಯತೆ ಹೆಚ್ಚಾಗಿರುವುದರಿಂದ ಕಿರಣ್ ಮತ್ತೆ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಿರಣ್ ಹೇಳುವ ಪ್ರಕಾರ 'ಬೆಂಗಳೂರಲ್ಲಿ ಕೊರೊನಾ ಸಮುದಾಯ ಹಂತ ತಲುಪಿದೆ. ಯಾವುದೇ ಪ್ರಯಾಣ ಹಿನ್ನೆಲೆ, ಸೋಂಕಿತರ ಸಂಪರ್ಕ ಇಲ್ಲದವರಿಗೂ ಸೋಂಕು ತಗುಲುತ್ತಿದೆ. ಬೆಂಗಳೂರಿನಲ್ಲಿ ವೈದ್ಯರ ಕೊರತೆ ಇರುವುದು ನಿಜ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕೆಲವೊಂದು ವೈದ್ಯರು ಹಾಗೂ ನರ್ಸ್ಗಳ ಆರೋಗ್ಯ ಸರಿ ಇಲ್ಲದ ಕಾರಣ ಅವರು ಸೇವೆಗೆ ಲಭ್ಯವಿಲ್ಲ'.
'ವೈದ್ಯಕೀಯ ಸ್ನಾತಕೋತ್ತರ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೂಡಾ ಸೇವೆಗೆ ಬಳಸಿಕೊಳ್ಳುವಂತೆ ಕರ್ನಾಟಕ ಸರ್ಕಾರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ಆದೇಶ ಬಂದಿದೆ. ನಗರದ ಆಸ್ಪತ್ರೆಗಳಲ್ಲಿ ಬೆಡ್ಗಳು ಕೂಡಾ ಖಾಲಿ ಇಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಈ ಕೆಲಸವನ್ನು ಕೆಲವು ದಿನಗಳ ಹಿಂದೆಯೇ ಮಾಡಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಡಾ . ಕಿರಣ್ ತೋಟಂಬೈಲು ಕೊರೊನಾ ಅಬ್ಬರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಅದೇನೆ ಇರಲಿ ಕೊರೊನಾ ಭೀತಿಯಲ್ಲಿ ಸೇವೆಗೆ ಗೈರಾಗಿರುವ ಅದೆಷ್ಟೋ ವೈದ್ಯರಿಗೆ ಡಾ. ಕಿರಣ್ ಮಾದರಿಯಾಗಿ ನಿಂತಿದ್ದಾರೆ. ಪತ್ನಿ ಹಾಗೂ ಮುದ್ದಾದ ಇಬ್ಬರು ಮಕ್ಕಳಿಂದ ಕಳೆದ 14 ದಿನಗಳಿಂದ ದೂರ ಇದ್ದು ಕಿರಣ್ ರೋಗಿಗಳ ಸೇವೆಗೆ ನಿಂತಿದ್ದಾರೆ. ಡಾ. ಕಿರಣ್ ತೋಟಂಬೈಲು ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.