ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿಕೋಮು ದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಂಡಲ್ ವಿರುದ್ಧ ಕೇಸು ದಾಖಲಿಸುವಂತೆ ಮುಂಬೈನ ಬಾಂದ್ರಾದಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ಕಂಗನಾ ಮತ್ತು ರಂಗೋಲಿ ತಮ್ಮ ಸಂದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ, ಧರ್ಮಗಳ ನಡುವೆ ಕೋಮು ಗಲಭೆ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ವಿನ್ಯಾಸಕ ಹಾಗೂ ಫಿಟ್ನೆಸ್ ತರಬೇತುದಾರ ಮುನ್ನಾವರಲಿ ಸಯ್ಯದ್ ನೀಡಿರುವ ದೂರಿನ ಆಧಾರದ ಮೇಲೆ ನ್ಯಾಯಾಧೀಶರಾದ ಜಯದೇವ್ ಘುಲೆ ಈ ಆದೇಶ ನೀಡಿದ್ದಾರೆ.
ದೂರುದಾರ ಸಯ್ಯದ್ ಐಪಿಸಿ ಸೆಕ್ಷನ್ 153 ಎ, 295 ಎ, ಮತ್ತು 124ಎ ಅನ್ವಯ ಕಂಗನಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಿದ್ದರು.
ಕಳೆದ ವಾರ ತುಮಕೂರಿನಲ್ಲಿ ನಡೆದ ರೈತ ಪ್ರತಿಭಟನೆ ಬಗ್ಗೆ ಕಂಗನಾ ಟ್ವೀಟ್ ಮಾಡಿ, ರೈತ ಕಾನೂನಿಗೆ ವಿರುದ್ಧವಾಗಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯಕ್ ಇ–ಮೇಲ್ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆದ್ರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಾರದಾಗ, ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಅಥವಾ ನ್ಯಾಯಾಲಯವೇ ನೇರವಾಗಿ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ನಾಯಕ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.