ಕರ್ನಾಟಕ

karnataka

ETV Bharat / sitara

ಕನ್ನಡ ಚಿತ್ರಗಳಿಗೆ ಪ್ರಾಮುಖ್ಯತೆ ನೀಡದ ಮಲ್ಟಿಪ್ಲೆಕ್ಸ್​​​​​​ಗಳು ನಡೆದದ್ದೇ ದಾರಿ...! - ಈಟಿವಿ ಭಾರತ್

ಕನ್ನಡ ಚಿತ್ರಗಳಿಗೆ ಪ್ರಾಮುಖ್ಯತೆ ನೀಡದ ಮಲ್ಟಿಪ್ಲೆಕ್ಸ್​​​ಗಳು ನಡೆದದ್ದೇ ದಾರಿ ಎನ್ನುವ ಹಾಗಾಗಿದೆ. ಈ ವಿಷಯದಲ್ಲಿ ಫಿಲಂ ಚೇಂಬರ್ ಕೂಡಾ ಕೈಚೆಲ್ಲಿ ಕುಳಿತಿದೆ. ಮಲ್ಟಿಪ್ಲೆಕ್ಸ್ ಬದಲಿಗೆ ಚಿತ್ರಮಂದಿರಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ನಿರ್ಮಾಪಕರಿಗೆ ಒಳ್ಳೆಯದು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಸಿನಿಮಾಗಳಿಗೆ ಸೇಫ್ ಎಂಬುದು ಎಲ್ಲರ ಅಭಿಪ್ರಾಯ.

ಫಿಲಂ ಚೇಂಬರ್

By

Published : Sep 27, 2019, 3:08 PM IST

ಮಲ್ಟಿಪ್ಲೆಕ್ಸ್‌ಗಳು ಕನ್ನಡ ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡದೆ ಪರಭಾಷಾ ಚಿತ್ರಗಳಿಗೆ ಮಣೆ ಹಾಕುತ್ತವೆ ಎಂಬುದು ಬಹಳ ದಿನಗಳಿಂದ ಕೇಳಿ ಬರುತ್ತಿರುವ ಆರೋಪ. ಪರಭಾಷಾ ಸಿನಿಮಾಗಳಿಗಾಗಿ ಎಷ್ಟೋ ಬಾರಿ ಕನ್ನಡ ಸ್ಟಾರ್ ನಟರ ಸಿನಿಮಾಗಳಿಗೂ ಗೇಟ್​​ಪಾಸ್ ಕೊಟ್ಟ ಅದೆಷ್ಟೋ ಉದಾಹರಣೆಗಳು ಇವೆ.

ಈ ಸಮಸ್ಯೆ ಬಗೆಹರಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕದ ತಟ್ಟಿದರೂ ಪ್ರಯೋಜನವಾಗಿಲ್ಲ. ಈ ವಿಷಯದಲ್ಲಿ ಫಿಲಂ ಚೇಂಬರ್ ಕೂಡಾ ಕೈ ಚೆಲ್ಲಿ ಕುಳಿತಿದೆ. ಏಕೆಂದರೆ ಫಿಲಂ ಚೇಂಬರ್​​ಗೆ ಮಲ್ಟಿಪ್ಲೆಕ್ಸ್​​​​​​​ಗಳ ಮೇಲೆ ಹಕ್ಕು ಚಲಾಯಿಸುವ ಅಧಿಕಾರ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಮಲ್ಟಿಪ್ಲೆಕ್ಸ್ ಮಾಲೀಕರು ಕಾನೂನು ಹೋರಾಟಕ್ಕೂ ಮುಂದಾಗಿದ್ದು ವಾಣಿಜ್ಯ ಮಂಡಳಿಗೂ ಸೆಡ್ಡು ಹೊಡೆದು ನಿಂತಿದ್ದಾರೆ. ಅಲ್ಲದೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮುಂಬೈನಲ್ಲಿದ್ದು ಇಲ್ಲಿನ ಸಮಸ್ಯೆ ಅವರಿಗೆ ಅರಿವಿಲ್ಲ ಹಾಗೂ ಅವರಿಗೆ ಅವರ ಹಿತಾಸಕ್ತಿಯೇ ಮುಖ್ಯವಾಗಿದ್ದು, ಪ್ರಾದೇಶಿಕ ಭಾಷೆಗಳ ನಿರ್ಮಾಪಕರು ಹಾಗೂ ವಿತರಕರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ ಕಾನೂನಿನಲ್ಲಿ ಇದೇ ಭಾಷೆಯ ಚಿತ್ರ ಹಾಕಬೇಕು ಎಂಬ ಯಾವುದೇ ನಿಯಮವೂ ಇಲ್ಲದ ಕಾರಣ ಮಲ್ಟಿಪ್ಲೆಕ್ಸ್​​​​​​​ಗಳು ವಾಣಿಜ್ಯ ಮಂಡಳಿಯ ಹಿಡಿತಕ್ಕೆ ಸಿಕ್ಕಿಲ್ಲ. ಆದ್ದರಿಂದ ವಾಣಿಜ್ಯ ಮಂಡಳಿ ಈ ವಿಚಾರದಲ್ಲಿ ಅಸಹಾಯಕವಾಗಿದ್ದು, ಮಲ್ಟಿಪ್ಲೆಕ್ಸ್​​​​​​​​​​​ಗಳು ಆಡಿದ್ದೇ ಆಟವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚಿಗಷ್ಟೇ ಬಿಡುಗಡೆಯಾದ ತೆಲುಗಿನ ಸಾಹೋ ಚಿತ್ರಕ್ಕಾಗಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದ ದರ್ಶನ್ ಅಭಿನಯದ 'ಕುರುಕ್ಷೇತ್ರ', ಹಾಗೂ 'ನನ್ನ ಪ್ರಕಾರ' ಚಿತ್ರಗಳಿಗೆ ಗೇಟ್ ಪಾಸ್ ಕೊಟ್ಟು 'ಸಾಹೋ'ಗೆ ರತ್ನಗಂಬಳಿ ಹಾಸಿದ್ದು.

ಮಲ್ಟಿಪ್ಲೆಕ್ಸ್​​​​​​​​​​​​ಗಳಲ್ಲಿ ಕನ್ನಡ ಚಿತ್ರಗಳ ಜೊತೆ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಆಗಿ ಬಿಡುಗಡೆಯಾಗುವ ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ನೀಡಲಾಗುವುದಿಲ್ಲ. ಅದರೆ ದಕ್ಷಿಣ ಭಾರತದ ಯಾವುದೇ ಚಿತ್ರ ಹಿಂದಿಗೆ ಡಬ್ಬಿಂಗ್ ಆದರೆ ಅಂತಹ ಚಿತ್ರಗಳ ಪ್ರದರ್ಶನಕ್ಕೆ ಯಾವುದೇ ತಕರಾರು ಇಲ್ಲ. ಒಂದು ವೇಳೆ ಇದನ್ನು ಯಾರಾದರೂ ಪ್ರಶ್ನಿಸಿದರೆ ಅವರ ಚಿತ್ರಗಳ ಪ್ರದರ್ಶನವನ್ನು ದೇಶಾದ್ಯಂತ ತಡೆಹಿಡಿದು‌ ನಿರ್ಮಾಪಕರು ಹಾಗೂ ವಿತರಕರ ಮೇಲೆ ಮಲ್ಟಿಪ್ಲೆಕ್ಸ್​​ ಅಸೋಸಿಯೇಷನ್ ದಬ್ಬಾಳಿಕೆ ಮಾಡುತ್ತದೆ. ಇದರಿಂದ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳು ಮಲ್ಟಿಪ್ಲೆಕ್ಸ್​​​​ನಲ್ಲಿ ಬಿಡುಗಡೆಯಾಗುವುದಿಲ್ಲ.

ಸಿನಿಮಾ ವಿತರಕರ ದೂರೇನು?

ಅಲ್ಲದೆ ಕನ್ನಡಕ್ಕೆ ಡಬ್ ಆದ ಚಿತ್ರಗಳು ರಿಲೀಸ್ ಆಗದಿದ್ದರೆ, ಕನ್ನಡ ಪರ ಹೋರಾಟಗಾರರು ಸುಖಾ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸಿ ಕನ್ನಡ ವಿರೋಧಿ ಪಟ್ಟ ಕಟ್ಟುತ್ತಾರೆ. ಅದರೆ ನಮ್ಮ ಕಷ್ಟ ಯಾರಿಗೂ ತಿಳಿದಿಲ್ಲ ಎಂದು ಪ್ರಸಿದ್ಧ ವಿತರಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾವು ಕಷ್ಟಪಟ್ಟು ಕೋಟ್ಯಂತರ ರೂಪಾಯಿ ನೀಡಿ ಸ್ಟಾರ್ ನಟರ ಚಿತ್ರಗಳನ್ನು ವಿತರಣೆ ಮಾಡುತ್ತೇವೆ. ಇದರಿಂದ ನಮಗಿಂತ ಮಲ್ಟಿಪ್ಲೆಕ್ಸ್​​​​​​​​​​​​​ಗಳಿಗೆ ಹೆಚ್ಚು ಲಾಭ. ಸ್ಟಾರ್ ನಟರ ಚಿತ್ರಗಳು ಮಲ್ಟಿಪ್ಲೆಕ್ಸ್​​​​​​ಗಳಲ್ಲಿ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿದರೂ ಅದರ ಅರ್ಧ ಪಾಲು ಅವರಿಗೇ ಹೋಗುತ್ತದೆ. ಒಂದು ಕೋಟಿ ರೂ ಕಲೆಕ್ಷನ್ ಮಾಡಿದ್ರೆ ಅದರಲ್ಲಿ ಐವತ್ತು ಲಕ್ಷ ರೂ ಮಲ್ಟಿಪ್ಲೆಕ್ಸ್​​​​​​ಗಳಿಗೆ ಪಾಲು ನೀಡಲೇಬೇಕು. ಇದರ ಜೊತೆ ಪಾರ್ಕಿಂಗ್ ಶುಲ್ಕ, ಹಿಡಿತವಿಲ್ಲದ ತಿಂಡಿಗಳ ಬೆಲೆಯಿಂದ ಹಣ ಗಳಿಸುತ್ತಾರೆ. ಒಟ್ಟಿನಲ್ಲಿ ಮಲ್ಟಿಪ್ಲೆಕ್ಸ್​​​​​​ಗಳಿಂದ ಚಿತ್ರರಂಗಕ್ಕೆ ಯಾವುದೇ ಉಪಯೋಗವಿಲ್ಲ, ಮಲ್ಟಿಪ್ಲೆಕ್ಸ್ ಬದಲಿಗೆ ಚಿತ್ರಮಂದಿರಗಳು ಹೆಚ್ಚು ಇದ್ರೆ ಚಿತ್ರರಂಗಕ್ಕೂ ಒಳ್ಳೆಯದು, ಅಲ್ಲದೆ ನಿರ್ಮಾಪಕರು, ವಿತರಕರಿಗೂ ಹೆಚ್ಚು ಲಾಭ ಇದೆ ಎಂದು ಕನ್ನಡದ ಪ್ರಸಿದ್ಧ ವಿತರಕರೊಬ್ಬರು ಈಟಿವಿ ಭಾರತ್ ಜೊತೆ‌ ಮಲ್ಟಿಪ್ಲೆಕ್ಸ್​​​​​​​​​​​​​ಗಳಿಂದ ಅನುಭವಿಸುತ್ತಿರುವ ಕಷ್ಟಗಳನ್ನು ಹಂಚಿಕೊಂಡರು.

ABOUT THE AUTHOR

...view details