ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಸ್ಟಾರ್ ಡಮ್ ಹೊಂದಿರುವ ಮಲ್ಟಿ ಟ್ಯಾಲೆಂಟೆಡ್ ನಟ ಅಂದ್ರೆ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ, ಕಿಚ್ಚ, ಬಾದಾ ಷಾ, ಹೆಬ್ಬುಲಿ, ಪೈಲ್ವಾನ್ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಏಕೈಕ ನಟ ಇವರು. ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿರುವ ಕಿಚ್ಚ ಸುದೀಪ್, 1996 ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ಆರಂಭವಾದ ಸಿನಿಮಾ ಪಯಣಕ್ಕಿಗ 26ವರ್ಷಗಳು ತುಂಬುತ್ತಿವೆ.
ಈ ವಿಚಾರವನ್ನ ಸ್ವತಃ ಕಿಚ್ಚ ಸುದೀಪ್ ಹಂಚಿಕೊಳ್ಳುವುದರ ಜೊತೆಗೆ ಪತ್ನಿ ಪ್ರಿಯಾ ಸುದೀಪ್ ಮಾಡಿರೋ ವಿಶ್ ಗೆ ಕಿಚ್ಚ ಕೃತಜ್ಙತೆ ಹೇಳಿದ್ದಾರೆ. ಅದು ಏನು ಅಂತಾ ತಿಳಿದುಕೊಳ್ಳೋ ಮುಂಚೆ ಕಿಚ್ಚನ ಸಿನಿ ಪಯಣದ ಜರ್ನಿ ಬಗ್ಗೆ ತಿಳಿದುಕೊಳ್ಳೋಣ.
ಐರನ್ ಲೆಗ್ ಅನ್ನುತ್ತಿದ್ದರು:ಸುದೀಪ್ ಬಣ್ಣ ಹಚ್ಚಿದ್ದು ಮೊದಲು ಬ್ರಹ್ಮ ಚಿತ್ರಕ್ಕಾದರೂ, ಈ ಸಿನಿಮಾ ಪೂರ್ತಿಯಾಗಲಿಲ್ಲ. ನಂತರ 1997ರಲ್ಲಿ ತಾಯವ್ವ ಚಿತ್ರದಲ್ಲಿ ನಟಿಸುತ್ತಾರೆ. ಆದರೆ ಇದು ಸುದೀಪ್ಗೆ ಹೇಳಿಕೊಳ್ಳುವಂತ ಹೆಸರು ನೀಡುವುದಿಲ್ಲ. ಬಳಿಕ ಪ್ರತ್ಯರ್ಥ ಚಿತ್ರ ಮಾಡ್ತಾರೆ. ಈ ಚಿತ್ರ ಕೂಡಾ ಬ್ರೇಕ್ ನೀಡದಿದ್ದಾಗ ಸುದೀಪ್ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿರುವ ಹಾಗೆ, ಸುದೀಪ್ ಐರನ್ ಲೆಗ್ ಅಂತಾ ಕನ್ನಡ ಚಿತ್ರರಂಗದಲ್ಲಿ ಕರೆಯೋದಿಕ್ಕೆ ಶುರು ಮಾಡ್ತಾರೆ. ಆಗ ಸುದೀಪ್ ಚಿತ್ರರಂಗದ ಸಹವಾಸವೇ ಸಾಕು ಎಂದು ನಿರ್ಧರಿಸುತ್ತಾರೆ.
ದಿಕ್ಕನ್ನೇ ಬದಲಾಯಿಸಿದ ಸ್ಪರ್ಶ :ಆ ಸಮಯದಲ್ಲಿ ಅವರಿಗೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸಿನಿಮಾ ಸ್ವಲ್ಪ ಮಟ್ಟಿಗೆ ಹೆಸರು ನೀಡುತ್ತದೆ. ಸುದೀಪ್ ತಂದೆ ಸಂಜೀವ್ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದವು. ಸುದೀಪ್ ಮತ್ತು ರೇಖಾ ಕೆಮಿಸ್ಟ್ರಿ ವರ್ಕ್ ಔಟ್ ಆಗಿ ಈ ಸಿನಿಮಾ ಸಕ್ಸಸ್ ಕಾಣುತ್ತೆ. ಆ ಕಾಲದಲ್ಲಿ ಸ್ಪರ್ಶ ಸಿನಿಮಾ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಕಿಚ್ಚನಿಗೆ ಸ್ಟಾರ್ ಪಟ್ಟ ತಂದುಕೊಡುತ್ತೆ.