'ಬಾರಿಸು ಕನ್ನಡ ಡಿಂಡಿಮವ'..., ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಖ್ಯಾತ ಗೀತೆಗಳಲ್ಲಿ ಒಂದು. ಈ ಹಾಡಿಗೆ ಮತ್ತಷ್ಟು ಖ್ಯಾತಿ ದೊರೆತಿದ್ದು ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಈ ಹಾಡನ್ನು ಹಾಡಿದ ನಂತರ.
ಕೆಲವು ವರ್ಷಗಳ ಹಿಂದೆ ರಾಜ್ಯ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮೈಸೂರಿನಲ್ಲಿ ಜನರ ನಡುವೆ ಈ ಹಾಡನ್ನು ರಾಗ ಸಂಯೋಜನೆ ಮಾಡಿ ಹಾಡಿಸಿದ್ದರು. ಅದೂ ಕೂಡಾ ಆಗ ಬಹಳ ಹೆಸರಾಯ್ತು. ಸುಗಮ ಸಂಗೀತ ಕ್ಷೇತ್ರದ ಮರೆಯಲಾರದ ಗೀತೆ ಇದು. ಈಗ 'ಬಾರಿಸು ಕನ್ನಡ ಡಿಂಡಿಮವ' ಎಂದು ಕನ್ನಡ ಚಿತ್ರವೊಂದು ಸೆಟ್ಟೇರಲಿದೆ. ಈ ಚಿತ್ರದ ಆಹ್ವಾನ ಪತ್ರಿಕೆ ಕೂಡಾ ಬಹಳ ವಿಶೇಷವಾಗಿದೆ. ತಂದೆ ಕುವೆಂಪು ಅವರನ್ನು ಪೂರ್ಣಚಂದ್ರ ತೇಜಸ್ವಿಯವರು ಸ್ಕೂಟರ್ನಲ್ಲಿ ಕರೆದೊಯ್ಯುವ ಅನಿಮೇಷನ್ ಚಿತ್ರವನ್ನು ಈ ಆಹ್ವಾನ ಪತ್ರಿಕೆಯಲ್ಲಿ ಬಳಸಿಕೊಳ್ಳಲಾಗಿದೆ.
ವರನಟ ಡಾ. ರಾಜ್ಕುಮಾರ್ ನಂತರ ಈ ಆಹ್ವಾನ ಪತ್ರಿಕೆಯಲ್ಲಿ ಶಾಸಕ ಎಸ್.ವಿ.ರಾಮದಾಸ್, ಶಂಕರ್ ಅಶ್ವತ್ಥ್, ಸ್ನೇಕ್ ಶ್ಯಾಮ್, ಪ್ರೊ. ದೊಡ್ಡರಂಗೇಗೌಡ, ಪುರೋಹಿತ್ ಎಸ್. ಶಂಭವಮೂರ್ತಿ, ಗಿನ್ನಿಸ್ ದಾಖಲೆ ವಿಜೇತ ಡಾ. ರಾಧಾ ಮಲ್ಲಪ್ಪ, ನಿರ್ಮಾಪಕರಾದ ರಮೇಶಪ್ಪ, ಆರ್ಜೆ ಸುನಿಲ್, ವಿಶ್ವನಾಥ್ ಹಾಗೂ ಆಹ್ವಾನ ಪತ್ರಿಕೆಯ ಕೊನೆಯ ವರನಟ ಡಾ. ರಾಜಕುಮಾರ್ ಫೋಟೋ ಜೊತೆ ಕೋವಿಡ್ 19 ರಕ್ಷಣೆ ಬಗ್ಗೆ ವಿವರ ನೀಡಲಾಗಿದೆ.
'ಬಾರಿಸು ಕನ್ನಡ ಡಿಂಡಿಮವ' ಯುವ ನಿರ್ದೇಶಕ ನವಿಲುಗರಿ ನವೀನ್ ಪಿ.ಬಿ. ಅವರ ಎರಡನೇ ನಿರ್ದೇಶನದ ಚಿತ್ರ. ಈ ಸಿನಿಮಾದಲ್ಲಿ ಮಕ್ಕಳು ಅಭಿನಯಿಸುತ್ತಿದ್ದಾರೆ. ಜೊತೆಗೆ ಪ್ರೊ. ದೊಡ್ಡರಂಗೇಗೌಡ ಅವರು ಕೂಡಾ ಅತಿಥಿ ಪಾತ್ರದಲ್ಲಿರುತ್ತಾರೆ. ಮೈಸೂರು ಹಾಗೂ ಪಾಂಡವಪುರ ಸುತ್ತ ಚಿತ್ರೀಕರಣ ನಡೆಯಲಿದೆ. ನವ ಪ್ರತಿಭೆ ಮನುರಾಜ್ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ. ರಾಜೇಶ್ವರಿ ಸುಂದರಮೂರ್ತಿ ಹಾಗೂ ಡಾ. ಕಾಸರಗೋಡು ಅಶೋಕ್ ಗೀತೆಗಳನ್ನು ಬರೆದಿದ್ದಾರೆ.
'ಬಾರಿಸು ಕನ್ನಡ ಡಿಂಡಿಮವ' ಆಹ್ವಾನ ಪತ್ರಿಕೆ ನವಿಲುಗರಿ ಬ್ಯಾನರ್ ಅಡಿಯಲ್ಲಿ ಅಶ್ವಿಕ ಮೈಸೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಳೆ ಆಗಸ್ಟ್ 14 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನೆರವೇರಲಿದೆ.