ಚಿತ್ರರಂಗದಲ್ಲಿ ಸಾಕಷ್ಟು ಬಾರಿ ಒಬ್ಬ ನಟ ಅಥವಾ ನಟಿ ಮಾಡಬೇಕಾಗಿರುವ ಪಾತ್ರ ಕಾರಣಾಂತರಗಳಿಂದ ಬೇರೆ ಕಲಾವಿದರ ಪಾಲಾಗುತ್ತದೆ. ಆದರೆ ಆ ಚಿತ್ರ ಸೂಪರ್ ಹಿಟ್ ಆದ ನಂತರ ಆ ಪಾತ್ರವನ್ನು ನಾನು ಬಿಟ್ಟೆನಲ್ಲಾ ಎಂದು ಆ ನಟ, ನಟಿಯರು ಬೇಸರ ಮಾಡಿಕೊಂಡಿರುವ ಎಷ್ಟೋ ಉದಾಹರಣೆಗಳುಂಟು.
'ಅಮರಶಿಲ್ಪಿ ಜಕಣಾಚಾರಿ' ಚಿತ್ರವನ್ನು ಮೊದಲು ಡಾ. ರಾಜ್ಕುಮಾರ್ ಮಾಡಬೇಕಿತ್ತು. ಆದರೆ ಕೊನೆ ಸಮಯದಲ್ಲಿ ಆ ಪಾತ್ರಕ್ಕೆ ಕಲ್ಯಾಣ್ ಕುಮಾರ್ ಅವರನ್ನು ಕರೆತರಲಾಯಿತು. 'ಗುರುಶಿಷ್ಯರು' ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ನಟಿಸಿದ್ದ ಪಾತ್ರ ಮೊದಲು ಶ್ರೀನಿವಾಸಮೂರ್ತಿ ಮಾಡಬೇಕಿತ್ತು ಆದರೆ ಇಲ್ಲೂ ಕೂಡಾ ಚಿತ್ರೀಕರಣ ಆರಂಭವಾದಾಗ ನಿಮ್ಮ ಪಾತ್ರವನ್ನು ವಿಷ್ಣುವರ್ಧನ್ ಮಾಡಲಿದ್ದಾರೆ ಎಂದು ದ್ವಾರಕೀಶ್, ಶ್ರೀನಿವಾಸ ಮೂರ್ತಿ ಬಳಿ ಹೇಳಿದಾಗ ಶ್ರೀನಿವಾಸಮೂರ್ತಿ ಅವರಿಗೆ ಆದ ನೋವು ಅಷ್ಟಿಷ್ಟಲ್ಲ. ಅದೇ ರೀತಿ ಕಾರಣಾಂತರಗಳಿಂದ ವಿಜಯ ರಾಘವೇಂದ್ರ 'ಮುಂಗಾರು ಮಳೆ' ಚಿತ್ರವನ್ನು ಕೈ ಬಿಟ್ಟರು. ಕೊನೆಗೆ ಆ ಪಾತ್ರ ಗಣೇಶ್ ಪಾಲಾಗಿ ಆ ಚಿತ್ರ ಸೂಪರ್ ಹಿಟ್ ಆಯ್ತು.
ಹಿರಿಯ ನಟ ಶ್ರೀನಿವಾಸ ಮೂರ್ತಿ ಕನ್ನಡ ಚಿತ್ರರಂಗ ಮಾತ್ರವಲ್ಲ ಇತರ ಚಿತ್ರರಂಗಗಳಲ್ಲಿ ಕೂಡಾ ಇಂತಹ ಘಟನೆಗಳು ಜರುಗಿವೆ. ಖ್ಯಾತ ನಿರ್ದೇಶಕ ಶಂಕರ್ 'ಮುಧಲವನ್' ಚಿತ್ರಕ್ಕಾಗಿ ವಿಜಯ್ ಅವರನ್ನು ಸಂಪರ್ಕಿಸಿದ್ದರು. ಆದರೆ ಆಗ ಕಾಲ್ಶೀಟ್ ಸಮಸ್ಯೆ ಎದುರಾಗಿದ್ದರಿಂದ ವಿಜಯ್ ಆ ಚಿತ್ರದಲ್ಲಿ ನಟಿಸಲಾಗಲಿಲ್ಲ. ನಂತರ ಆ ಪಾತ್ರ ಅರ್ಜುನ್ ಸರ್ಜಾಗೆ ಒಲಿದುಬಂತು. ಅರ್ಜುನ್ ಸರ್ಜಾ ಆಗಲೇ ತಮಿಳು ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದ್ದರು. ಈ ಚಿತ್ರದಲ್ಲಿ ಅರ್ಜುನ್ಗೆ ನಾಯಕಿಯಾಗಿ ಬಾಲಿವುಡ್ ನಟಿ ಮನಿಷಾ ಕೊಯಿರಾಲ ನಟಿಸಿದ್ದರು.
1999ರಲ್ಲಿ 'ಮುಧವಲನ್' ಚಿತ್ರ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು. ಈ ಪಾತ್ರವನ್ನು ಬಿಟ್ಟೆನಲ್ಲಾ ಎಂದು ವಿಜಯ್ ಹಾಗೂ ಅವರ ತಂದೆ ಚಂದ್ರಶೇಖರ್ ಬಹಳ ಬೇಸರ ಮಾಡಿಕೊಂಡರು. ಇದಾದ 13 ವರ್ಷಗಳ ಬಳಿಕ ವಿಜಯ್ಗಾಗಿ ನಿರ್ದೇಶಕ ಶಂಕರ್ 'ನನ್ಬನ್' ಚಿತ್ರವನ್ನು ನಿರ್ದೇಶಿಸಿದರು. ಇದು ಬಾಲಿವುಡ್ನಲ್ಲಿ '3 ಈಡಿಯಟ್ಸ್' ಹೆಸರಲ್ಲಿ ರೀಮೇಕ್ ಆಯ್ತು.
ಇದೀಗ ನಿರ್ದೇಶಕ ಶಂಕರ್ 'ಮುಧಲವನ್' ಸೀಕ್ವೆಲ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಭಾಗ 2 ರಲ್ಲಿ ನಾಯಕ ಯಾರಾಗಲಿದ್ದಾರೆ ಎಂಬ ವಿಚಾರ ತಿಳಿದುಬಂದಿಲ್ಲ. ಸದ್ಯಕ್ಕೆ ಶಂಕರ್ 'ಇಂಡಿಯನ್' ಸೀಕ್ವೆಲ್ನಲ್ಲಿ, ವಿಜಯ್ 'ಮಾಸ್ಟೆರ್' ಚಿತ್ರದಲ್ಲಿ ಹಾಗೂ ಅರ್ಜುನ್ ಸರ್ಜಾ ಕೂಡಾ ಹೊಸ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಆದರೆ ಮೂಲಗಳ ಪ್ರಕಾರ ಶಂಕರ್ 'ಮುಧಲವನ್' ಸೀಕ್ವೆಲ್ಗೆ ವಿಜಯ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಶಂಕರ್ ಆಗಲೀ, ವಿಜಯ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ.