ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಸಾವಿನ ಬಳಿಕ ತಂದೆಯಂತೆ ಕಣ್ಣುಗಳನ್ನು ದಾನ ಮಾಡಿ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಅಪ್ಪು ಸಾವಿನ ಬಳಿಕ ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿಯವರು 'ನೇತ್ರದಾನ ಮಹಾದಾನ' ಎಂಬ ಲೋಗೋವನ್ನು ನಟ ರಾಘವೇಂದ್ರ ರಾಜ್ ಕುಮಾರ್ ಸಮ್ಮುಖದಲ್ಲಿ ಅನಾವರಣಗೊಳಿಸಿದರು.
ಕಂಠೀರವ ಸ್ಟುಡಿಯೋದ ಬಳಿ ನಡೆದ ನಾರಾಯಣ ನೇತ್ರಾಲಯದ ಕಾರ್ಯಕ್ರಮ.. ಬಳಿಕ ಮಾತನಾಡಿದ ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿಯವರು, ಪುನೀತ್ ನಿಧನರಾದ ನಂತರ ರಾಜ್ಯದಲ್ಲಿ ನೇತ್ರದಾನ ಪ್ರಮಾಣ ಹೆಚ್ಚಾಗಿದೆ. ಸುಮಾರು 440ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಿದ್ದಾರೆ.
ಇದು ದೊಡ್ಡ ದಾಖಲೆ. ಯಾವತ್ತೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ನೇತ್ರದಾನಕ್ಕೆ ಮುಂದಾಗಿರಲಿಲ್ಲ. ಅಪ್ಪು ನೇತ್ರದಾನದಲ್ಲಿ ಬ್ರಾಂಡ್ ಅಂಬಾಸಿಡರ್ ಎಂದು ಭುಜಂಗ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿದವರ ಪಟ್ಟಿಯೂ ದೊಡ್ಡದಿದೆ. ಈವರೆಗೆ ಸುಮಾರು 12,000ಕ್ಕೂ ಅಧಿಕ ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದಾರಂತೆ. ಇದರ ಜೊತೆಗೆ ಕರೆ ಮಾಡಿ ನೇತ್ರದಾನ ಮಾಡಬೇಕು.
ಹೆಸರು ನೋಂದಾಯಿಸಬೇಕೆಂದು ಕೇಳುತ್ತಿದ್ದಾರೆ. ಹೀಗಾಗಿ, ನೇತ್ರದಾನಕ್ಕಾಗಿ ನೋಂದಾಯಿಸಿಕೊಳ್ಳಬೇಕಾದ ದೂರವಾಣಿ ಸಂಖ್ಯೆಯವರು ಲೋಗೋವನ್ನು ಬಿಡುಗಡೆ ಮಾಡಿದರು.
ಬಳಿಕ ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ವೈದ್ಯೋ ನಾರಾಯಣೋ ಹರಿಃ ಅಂತಾರೆ. ಇವರ ಸಹಾಯದಿಂದ ನನ್ನ ತಮ್ಮನ ಕಣ್ಣುಗಳು ಎಲ್ಲರನ್ನು ನೋಡುತ್ತಿವೆ. ಅಪ್ಪು ಎಲ್ಲೂ ಹೋಗಿಲ್ಲ, ಎರಡು ಕಣ್ಣುಗಳನ್ನು ಬಿಟ್ಟು ಹೋಗಿದ್ದಾನೆ. ವ್ಯಕ್ತಿ ಹೋದ ಮೇಲೂ ಈ ರೀತಿ ಆಗಬೇಕು. ನೇತ್ರದಾನದ ಅರಿವು ನಮಗಿರಬೇಕು.
ಪುನೀತ್ ಹೋಗ್ತಾ ಬದಲಾವಣೆ ತಂದಿದ್ದಾನೆ. ಅಪ್ಪಾಜಿಯವರು ಕೂಡ ತಮ್ಮ ಕಣ್ಣುಗಳ ದಾನದಿಂದ ನೇತ್ರದಾನ ಮಹಾದಾನ ಎಂಬ ಶ್ರೇಷ್ಠವಾದ ಕಾರ್ಯಕ್ಕೆ ನಾಂದಿ ಹಾಡಿ ಹೋಗಿದ್ದರು. ಈಗ ನೇತ್ರದಾನದ ಬಗ್ಗೆ ಅಭಿಯಾನ ಶುರುವಾಗಿದೆ ಎಂದರು.