ಬಹುನಿರೀಕ್ಷಿತ 'ದೃಶ್ಯಂ 2' ಮಲಯಾಳಂ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗವೇ ಈ 'ದೃಶ್ಯಂ 2' ಸಿನಿಮಾ.
ಮೋಹನ್ ಲಾಲ್ ಅವರು ದೃಶ್ಯಂ 2 ಸಿನಿಮಾದ ಟೀಸರ್‌ನ ಬಿಡುಗಡೆ ಮಾಡಿದ ನಂತರ ತಮ್ಮ ಫೇಸ್ಬುಕ್ನಲ್ಲಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದು, ಸಿನಿಮಾವು ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಬದಲಿಗೆ ಅಮೆಜಾನ್ ಪ್ರೈಂನಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.
'ದೃಶ್ಯಂ' ಸಿನಿಮಾವನ್ನು ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ 'ದೃಶ್ಯಂ 2' ಸಿನಿಮಾವನ್ನು ಸಹ ನಿರ್ದೇಶಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿ ನಟಿಸಿದ್ದ ಮೀನಾ ಮೋಹನ್ ಲಾಲ್, ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಆಶಾ ಶರತ್ ಇನ್ನೂ ಕೆಲವರು ನಟಿಸಲಿದ್ದಾರೆ. ದೃಶ್ಯಂ ಸಿನಿಮಾ ನಡೆದ ಅದೇ ಹಳ್ಳಿಯಲ್ಲಿ ಎರಡನೇ ಸಿನಿಮಾದ ಕತೆಯೂ ನಡೆಯಲಿದೆ.
2013ರಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ' ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಚೈನೀಸ್ ಭಾಷೆಗಳಿಗೆ ರಿಮೇಕ್ ಆಗಿ ಬಹುತೇಕ ಎಲ್ಲಾ ಭಾಷೆಗಳಲ್ಲೂ ಹಿಟ್ ಆಗಿತ್ತು. ಇದೀಗ 'ದೃಶ್ಯಂ 2' ಚಿತ್ರದ ಮೇಲೆ ಸಹ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಯಿದೆ.