ಈ ನಟ ಕಲಿತದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಆದ್ರೆ ಕೈ ಬೀಸಿ ಕರೆದದ್ದು ಬಣ್ಣದ ಲೋಕ. ಅದೇ ಕಾರಣಕ್ಕೆ ಸಿಕ್ಕ ಕೆಲಸಕ್ಕೆ ಗುಡ್ ಬೈ ಹೇಳಿ ನಟನೆಯತ್ತ ಮುಖ ಮಾಡಿದ ಬೆಂಗಳೂರಿನ ಹ್ಯಾಂಡ್ ಸಮ್ ಹುಡುಗ ಸ್ವಾಮಿನಾಥನ್. ಅಂದ ಹಾಗೇ ಸ್ವಾಮಿನಾಥನ್ ಎಂದ ತಕ್ಷಣ ಯಾರು ಎಂಬ ಕುತೂಹಲ ಮೂಡುವುದು ಸಹಜ. ಯಾಕೆಂದರೆ ಕಿರುತೆರೆಯಲ್ಲಿ ಇವರ ಹೆಸರೇ ಬೇರೆ.
ಕಿರುತೆರೆಯಲ್ಲಿ ಮಿಥುನ್ ಎಂದೇ ಹೆಸರು ಗಳಿಸಿರುವ ಸ್ವಾಮಿನಾಥನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರಾವಾಹಿಯ ನಾಯಕ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿಯೇ ನಟನೆಯ ಬಗ್ಗೆ ಗೀಳು ಹತ್ತಿಸಿಕೊಂಡಿದ್ದ ಇವರು ಸ್ನೇಹಿತರ ಜೊತೆಗೂಡಿ ಒಂದೆರಡು ಟೆಲಿಫಿಲಂಗಳಲ್ಲಿಯೂ ನಟಿಸಿದ್ದಾರೆ.
ಟೆಲಿಫಿಲಂಗಳಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು. ದಿ ಪ್ಲಾನ್ ಮತ್ತು ವೆನ್ ದಿ ಡಾನ್ ಮೀಟ್ ದಿ ಡಸ್ಕ್ ಟೆಲಿಫಿಲಂಗಳಲ್ಲಿ ನಟಿಸಿ ಯಶಸ್ಸು ಪಡೆದ ಸ್ವಾಮಿನಾಥನ್, ಮುಂದೆ ಬಣ್ಣದ ಲೋಕದಲ್ಲಿ ಮುಂದುವರಿಯುವ ಸಂಕಲ್ಪ ಮಾಡಿದರು. ಮುಂದೆ ಕಿರುತೆರೆಯತ್ತ ಮುಖ ಮಾಡಿದ ಹ್ಯಾಂಡ್ ಸಮ್ ಹುಡುಗ ಆಡಿಶನ್ಗಳನ್ನು ಅಟೆಂಡ್ ಮಾಡಲಾರಂಭಿಸಿದರು. ಆಗ ಕಲರ್ಸ್ ಕನ್ನಡ ವಾಹಿನಿಯಿಂದ ಬಂದ ಒಂದು ಕರೆ ಸ್ವಾಮಿನಾಥನ್ ಅವರ ಹಣೆಬರಹವನ್ನೇ ಬದಲಿಸಿತು.
ಅದೇನೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಮಿಥುನ್ ಆಗಿ ನಟಿಸುವ ಆಫರ್ ನೀಡಿದರು. ಅಸ್ತು ಎಂದ ಸ್ವಾಮಿನಾಥನ್ ಸದ್ಯ ಮಿಥುನ್ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಿಥುನ್ ಅಲಿಯಾಸ್ ಸ್ವಾಮಿನಾಥನ್ ಅವರಿಗೆ ಬೇರೆ ಧಾರಾವಾಹಿಯಿಂದಲೂ ನಟಿಸುವ ಅವಕಾಶ ಬಂದಿದೆಯಂತೆ. ಆದ್ರೆ ಮಿಥುನ ರಾಶಿಯಲ್ಲಿ ಬ್ಯುಸಿಯಾಗಿರುವ ಕಾರಣ ಯಾವುದನ್ನು ಕೂಡಾ ಸ್ವಾಮಿನಾಥನ್ ಒಪ್ಪಿಕೊಂಡಿಲ್ಲ.