ರಘುರಾಮ್ ನಿರ್ದೇಶನದ 'ಮಿಸ್ಸಿಂಗ್ ಬಾಯ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಪೊಲೀಸ್ ಇಲಾಖೆಯ ಪ್ರತಿಷ್ಠೆಯನ್ನು ಹೆಚ್ಚಿಸುವ ಇದು ಮನಸ್ಸಿಗೆ ನಾಟುವ ಸಿನಿಮಾ. 25 ವರ್ಷಗಳ ಹಿಂದೆ ಕಳೆದುಹೋಗುವ ಮಗ ಮತ್ತೆ ವಾಪಸ್ ಬರುತ್ತಾನೆ ಎಂದು ತಾಯಿ ಹಂಬಲಿಸುವ ಕಥೆ ಇದು.
'ತಾಯಿ ಮತ್ತು ತಾಯ್ನಾಡಿಗೆ' ಎಂಬ ಉಪ ಶೀರ್ಷಿಕೆ ಜೊತೆ ನಿರ್ದೇಶಕ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇದೊಂದು ನೈಜ ಕಥೆಯಾಗಿದ್ದು, ನಿಜ ಜೀವನದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಹೆಮ್ಮೆಯ ಪೊಲೀಸ್ ಇನ್ಸ್ಪೆಕ್ಟರ್ ಲವಕುಮಾರ್ ತಾಯಿ ಹಾಗೂ ಮಗನನ್ನು ಜೊತೆ ಸೇರಿಸುವ ಕೆಲಸ ಮಾಡಿ ಇಲಾಖೆಗೆ ಹೆಮ್ಮೆ ತಂದುಕೊಟ್ಟಿದ್ದರು.
ಶಂಭು ಎಂಬ 5 ವರ್ಷದ ಬಾಲಕನೊಬ್ಬ ತಿಳಿಯದೆ ಯಾವುದೋ ರೈಲಿಗೆ ಹತ್ತಿ ಮತ್ತೊಂದು ಸ್ಥಳಕ್ಕೆ ಸೇರಿ ಅಲ್ಲಿಂದ ಅನಾಥಾಶ್ರಮವೊಂದನ್ನು ಸೇರುತ್ತಾನೆ. ಆಶ್ರಮದ ಮಧ್ಯವರ್ತಿ ಬೇಡಿಕೆ ಇಟ್ಟ 1000 ರೂಪಾಯಿ ನೀಡಲಾಗದೆ, ಮಗ ಅಲ್ಲೇ ಬೆಳೆಯಲಿ ಎಂದು ತಂದೆ ಅಲ್ಲೇ ಬಿಟ್ಟು ಹೋಗುತ್ತಾನೆ. ಕೆಲವು ದಿನಗಳ ನಂತರ ಶಂಭು ಮಕ್ಕಳಿಲ್ಲದ ದಂಪತಿ ಮನೆ ಸೇರುತ್ತಾನೆ ( ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್). ನಿಶ್ಚಯ್ ಹೆಸರಿನಲ್ಲಿ ಬೆಳೆದು ದೊಡ್ಡವನಾಗುವ ಶಂಭು ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ ಬೆಳೆಯುತ್ತಾನೆ. ಇತ್ತ ಹೆತ್ತ ತಾಯಿ ಮಗ ಒಂದಾದರೊಂದು ದಿನ ಮನೆಗೆ ವಾಪಸ್ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಶಂಭುವನ್ನು ಕಾಯುತ್ತಿರುತ್ತಾರೆ. ಶಂಭು ಅಲಿಯಾಸ್ ನಿಶ್ಚಯ್ ತನ್ನ ಹೆತ್ತವರನ್ನು ಸೇರುತ್ತಾನೋ ಇಲ್ಲವೋ ಎಂಬುದು ನೀವು ಥಿಯೇಟರ್ಗೆ ಹೋಗಿ ನೋಡಬೇಕು.
ನಾಯಕ ಗುರುನಂದನ್ ಅಭಿನಯ ಚೆನ್ನಾಗಿದೆ. ಇನ್ನು ರಂಗಾಯಣ ರಘು ಅವರ ಕಾಮಿಡಿ, ವಿಲನ್ ಪಾತ್ರಗಳಲ್ಲಿ ನೋಡಿದವರು ಈ ಚಿತ್ರದಲ್ಲಿ ಅವರ ಮತ್ತೊಂದು ಅಭಿನಯ ಶೈಲಿಯನ್ನು ನೋಡಬಹುದು. ಕಾರ್ ಡ್ರೈವರ್ ಆಗಿ ನಟಿಸಿರುವ ರವಿಶಂಕರ್ ಗೌಡ ಕೂಡಾ ಇಷ್ಟವಾಗುತ್ತಾರೆ. ವಿ. ಹರಿಕೃಷ್ಣ ಅವರ ಅಮ್ಮನ ಕುರಿತಾದ ಹಾಡು ಮಾಧುರ್ಯದ ಜೊತೆಗೆ ಅರ್ಥಗರ್ಭಿತವಾಗಿದೆ.