ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಚಿತ್ರರಂಗವಲ್ಲದೆ ಮೇಘನಾ ರಾಜ್ ಕುಟುಂಬಕ್ಕೆ ತುಂಬಲಾರದ ನೋವನ್ನು ತಂದಿದೆ. ಈ ಮಧ್ಯೆ ಮೇಘನಾ ರಾಜ್ಗೆ ಗಂಡು ಮಗು ಜನಿಸಿದ್ದರಿಂದ ಎರಡೂ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಮೇಘನಾ ರಾಜ್ಗೆ ಮಗು ಹುಟ್ಟಿ 21 ದಿನಗಳ ಬಳಿಕ ಮೇಘನಾ ರಾಜ್ ಕುಟುಂಬ ಮಗುವನ್ನು ತೊಟ್ಟಿಲಿಗೆ ಹಾಕುವ ಪೂಜೆ ಮಾಡಿದೆ. ಈ ಸಂದರ್ಭದ ಕುರಿತು ಮಾತನಾಡಿರುವ ಅವರು, ಮಾಧ್ಯಮದ ಮುಂದೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಮೊದಲು ಚಿರು ನೆನೆದು ಕಣ್ಣೀರಿಟ್ಟ ಅವರು, ಹಳೆಯದನ್ನೆಲ್ಲಾ ನಾನು ನೆನಪು ಮಾಡೋದಿಲ್ಲ. ನನ್ನ ಪ್ರೈವೇಸಿಗೆ ಬೆಲೆ ಕೊಟ್ಟ ಮಾಧ್ಯಮಗಳಿಗೆ ಧನ್ಯವಾದ. ನನ್ನ, ಚಿರುನ ಮನೆ ಮಕ್ಕಳಾಗಿ ಎಲ್ಲರೂ ಕಂಡ್ರು. ಇವತ್ತು ತೊಟ್ಟಿಲು ಶಾಸ್ತ್ರದಿಂದಾಗಿ ಮನೆಯಲ್ಲಿ ಹೊಸ ಸಂತಸ ತಂದಿದೆ ಎಂದರು.
ನನ್ನ ಮನೆಗೆ ಮಗ ಬಂದಿದ್ದಾನೆ. ಅವನ ತೊಟ್ಟಿಲು ಶಾಸ್ತ್ರದ ದಿನ ಸಂತಸ ಹಂಚಿಕೊಳ್ಳಬೇಕು ಅಂತ ಅನ್ನಿಸಿತ್ತು. ತೊಟ್ಟಿಲು ಶಾಸ್ತ್ರ ತವರು ಮನೆ ಕಡೆಯಿಂದ ಮಾಡ್ತಾ ಇದ್ದಾರೆ. ನನ್ನ ಮನೆಗೆ ಬಂದಿರುವ ತೊಟ್ಟಿಲು ಕ್ಯೂಟ್ ಆಗಿದೆ ಎಂದ ಅವರು, ತವರು ಮನೆ ಶಾಸ್ತ್ರಕ್ಕೆ ವನಿತಾ ಅವರು ಕೊಟ್ಟಿರುವ ತೊಟ್ಟಿಲನ್ನೇ ಬಳಸಿಕೊಂಡಿದ್ದೇವೆ ಎಂದರು.
ನನ್ನ ಶಕ್ತಿ ಅಂದ್ರೆ ಅದು ನನ್ನ ಮಗ ಮಾತ್ರ. ಚಿರು ಅಗಲಿಕೆಯ ನೋವು ನನ್ನಿಂದ ಮರೆಯೋಕೆ ಅಸಾಧ್ಯ. ನನ್ನ ಮಗನನ್ನ ನೋಡಿದಾಗ ಚಿರು ಹೇಗೆ ನೋಡಿಕೊಳ್ತಾ ಇದ್ರು ಅನ್ನೋದು ನನಗೆ ಕಾಣುತ್ತೆ. ಚಿರು ಅಂದ್ರೆ ಸೆಲೆಬ್ರೇಷನ್, ಅವರ ನಗು ಮುಖ ಕಣ್ಣ ಮುಂದೆ ಬರುತ್ತೆ ಎಂದರು.
ನನಗೆ ಹೆಣ್ಣು ಮಗುನೇ ಬೇಕು ಅಂತ ಹೇಳ್ತಾ ಇದ್ದೆ. ಆದರೆ ಚಿರು ಮಾತ್ರ ಇಲ್ಲಾ ನನಗೆ ಗಂಡು ಮಗುನೇ ಹುಟ್ಟೋದು ಅಂತ ಹೇಳ್ತಾ ಇದ್ರು. ಎರಡು ಮಕ್ಕಳು ಆಗುತ್ತೆ ಅನ್ನೋ ಸುದ್ದಿ ಹರಿದಾಡ್ತಾ ಇತ್ತು. ನನಗೆ ಟ್ವಿನ್ಸ್ ಆಗ್ಬೇಕು ಅಂತ ಆಸೆ ಇತ್ತು. ಚಿರು ಮರೆಯಾದ ಸಂದರ್ಭದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ನನ್ನ ಕುಟುಂಬಕ್ಕೆ ಧೈರ್ಯ ತುಂಬಿದೆ. ಸೌತ್ ಇಂಡಸ್ಟ್ರಿ ತುಂಬಾ ಸಪೋರ್ಟ್ ಮಾಡಿದೆ ಎಂದು ತಿಳಿಸಿದರು.
ಸಿನಿಮಾ ನನ್ನ ರಕ್ತದಲ್ಲಿ ಇದೆ. ನನ್ನ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿಯಲ್ಲಿ ಇದೆ. ಇವತ್ತಿನ ತೊಟ್ಟಿಲು ಶಾಸ್ತ್ರ ಕೇವಲ ಟ್ರೈಲರ್ ಮಾತ್ರ. ಮುಂದೆ ಧೃವ ತಂದಿರುವ ತೊಟ್ಟಿಲಲ್ಲಿ ಇನ್ನೊಮ್ಮೆ ಕಾರ್ಯಕ್ರಮ ನಡೆಯಲಿದೆ. ಮೊದಲು ನಾನು ಸೀಮಂತ ಬೇಡ ಅಂತ ಹೇಳಿದ್ದೆ. ಚಿರು ಇಲ್ಲದ ಮೇಲೆ ಸೀಮಂತ ಯಾಕೆ ಬೇಕು? ಅಂತ ಅನ್ಕೊಂಡಿದ್ದೆ. ಕೊನೆಯದಾಗಿ ನಾನು 4 ಬಾರಿ ಸೀಮಂತ ಮಾಡಿಕೊಂಡೆ. ಚಿರು ಸ್ಥಾನವನ್ನ ಮನೆಯಲ್ಲಿ ನಾನು ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ. ಮಗನನ್ನ ಸಿನಿಮಾ ಇಂಡಸ್ಟ್ರಿಗೆ ಲಾಂಚ್ ಮಾಡೋದಾದ್ರೆ ನಾನು ರೆಡಿ ಅಂದ್ರು.