ನಟ ಚಿರಂಜೀವಿ ಸರ್ಜಾ ನಿಧನರಾಗಿ ಒಂದು ತಿಂಗಳು ಕಳೆದಿದೆ. ಸೋಮವಾರ ಸರ್ಜಾ ಕುಟುಂಬ ಚಿರು ಅವರನ್ನು ಮಣ್ಣು ಮಾಡಲಾದ ನೆಲಗುಳಿ ಫಾರ್ಮ್ಹೌಸ್ಗೆ ತೆರಳಿ ಮೊದಲನೇ ತಿಂಗಳ ಪುಣ್ಯತಿಥಿ ಕಾರ್ಯವನ್ನು ಕೂಡಾ ನೆರವೇರಿಸಿ ಬಂದಿದೆ.
ಮೇಘನಾ ರಾಜ್ ಹಾಗೂ ಕುಟುಂಬ ನಿಧಾನವಾಗಿ ಈ ಆಘಾತದಿಂದ ಚೇತರಿಸಿಕೊಳ್ಳುತ್ತಿದೆ. ಮೊನ್ನೆಯಷ್ಟೇ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 'ನೀನು ಬಯಸಿದಂತೆ ನಾನು ಬದುಕುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಪತಿ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.
'ಅಂದಿಗೂ, ಇಂದಿಗೂ ಮುಂದೆಯೂ, ಚಿರುಗಾಗಿ ನನ್ನ ಮುಖದಲ್ಲಿ ನಗು ಇರುತ್ತದೆ. ನನಗೆ ಅವರು ನೀಡಿರುವುದು ಅತ್ಯಮೂಲ್ಯ ಉಡುಗೊರೆ ನಗು. ಪ್ರತಿ ದಿನವೂ ನಿನ್ನದೇ ಚಿಂತೆ. ನಿನ್ನ ನಗು, ತರಲೆ, ಒಟ್ಟಾಗಿ ಇರಬೇಕು ಎಂಬ ಆಸೆ, ನಿನ್ನ ಪ್ರಾಮಾಣಿಕತೆ, ಎಲ್ಲವೂ ನೆನಪಿಗೆ ಬರುತ್ತದೆ. ಇನ್ನು ಮುಂದೆ ನಾನು ಅಳುವುದಿಲ್ಲ. ನಿನ್ನ ಆಸೆಯಂತೆ ನಾನು ನಗುತ್ತಲೇ ಇರುತ್ತೇನೆ. ನಮ್ಮ ಶಾಶ್ವತ ಪ್ರೀತಿಗಾಗಿ ಎಲ್ಲರ ಜೊತೆ ಇರುವೆ. ಲವ್ ಯು ಬೇಬಿ' ಎಂದು ಬರೆದುಕೊಂಡಿದ್ದಾರೆ.
ಚಿರು ಅವರ ದೊಡ್ಡ ಫೋಟೋವನ್ನು ಇರಿಸಿ ಅದರ ಸುತ್ತ ಹೂವಿನ ಅಲಂಕಾರ ಮಾಡಿ ಆ ಫೋಟೋ ಮುಂದೆ ಚಿರು ಗೆಳೆಯರು ಹಾಗೂ ಅವರ ಪತ್ನಿಯರು ಮೇಘನಾ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಗೆಳೆಯರಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿ ಚಂದ್ರನ್, ಟಿ. ಎಸ್. ನಾಗಾಭರಣ ಪುತ್ರ ಪನ್ನಗಾಭರಣ ಕೂಡಾ ಇದ್ದಾರೆ.