ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತಿರುವ ಮೇಘ ಶೆಟ್ಟಿ ಸಿನಿಮಾದಲ್ಲಿ ನಟಿಸುವುದು ಖಚಿತವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಚಿತ್ರದ ಮೂವರು ನಾಯಕಿಯರಲ್ಲಿ ಮೇಘ ಶೆಟ್ಟಿ ಕೂಡಾ ಒಬ್ಬರು ಎನ್ನಲಾಗಿದೆ.
ಗಣೇಶ್ ಅವರೊಂದಿಗೆ ನಟಿಸಲು ಬಹಳ ಎಕ್ಸೈಟ್ ಆಗಿದ್ದೇನೆ ಎನ್ನುತ್ತಾರೆ ಮೇಘ. ಇದೊಂದು ಲವ್, ಥ್ರಿಲ್ಲರ್ ಸ್ಟೋರಿ ಆಗಿದ್ದು ಪ್ರೇಕ್ಷಕರಿಗೆ ಮನರಂಜನೆ ನೀಡುವುದು ಗ್ಯಾರಂಟಿ ಎಂದು ಚಿತ್ರತಂಡ ಹೇಳಿದೆ. ಇದು ಮೇಘಶೆಟ್ಟಿ ಅಭಿನಯದ ಮೊದಲ ಸಿನಿಮಾ. ಚಿತ್ರದಲ್ಲಿ ಮೂವರು ನಾಯಕಿಯರಲ್ಲಿ ಮೇಘ ಹೋಮ್ಲಿ ಗರ್ಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಮಹೇಶ್ ಗೌಡ ಹೇಳಿದ್ದಾರೆ. ಸಂಭಾಷಣೆ ಕೂಡಾ ಮಹೇಶ್ ಗೌಡ ಬರೆದಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ ರಗಡ್ ಸಿನಿಮಾವನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಮಹೇಶ್ ಗೌಡ ಈಗ 'ತ್ರಿಬಲ್ ರೈಡಿಂಗ್' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.