ಸ್ಯಾಂಡಲ್ವುಡ್ ಯುವಸಾಮ್ರಾಟ್ ಚಿರಂಜಿವಿ ಸರ್ಜಾ ಅಗಲಿ ಇಂದು 10ನೇ ದಿನ. ನಾಳೆ, 11ನೇ ದಿನಕ್ಕೆ ಚಿರು ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಕುಟುಂಬದವರು ಏರ್ಪಡಿಸಿದ್ದಾರೆ. ಭಾರವಾದ ಮನಸ್ಸಿನಿಂದ ಚಿರು ಕಾರ್ಯವನ್ನು ಕುಟುಂಬಸ್ಥರು ಮಾಡಲೇಬೇಕಿದೆ.
ಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯಸ್ಮರಣೆ...ಮಾಧ್ಯಮದವರಿಗೆ ಅರ್ಜುನ್ ಸರ್ಜಾ ಆಹ್ವಾನ - Yuva samrat Chiranjeevi Sarja
ಜೂನ್ 7 ರಂದು ಹೃದಯಾಘಾತದಿಂದ ನಿಧನರಾದ ಚಿರಂಜೀವಿ ಸರ್ಜಾ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಾಳೆ ಅವರ ಫಾರಂಹೌಸ್ನಲ್ಲಿ ಏರ್ಪಡಿಸಲಾಗಿದೆ. ನಟ ಅರ್ಜುನ್ ಸರ್ಜಾ ಈ ಕಾರ್ಯಕ್ರಮಕ್ಕೆ ಮಾಧ್ಯಮದವರನ್ನೂ ಆಹ್ವಾನಿಸಿದ್ದಾರೆ.
ಇನ್ನು ಚಿರಂಜೀವಿ ಸರ್ಜಾ ಸೋದರಮಾವ, ನಟ ಅರ್ಜುನ್ ಸರ್ಜಾ ನಾಳಿನ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಮಾಧ್ಯಮ ಮಿತ್ರರನ್ನೂ ಆಹ್ವಾನಿಸಿದ್ದಾರೆ. ಅರ್ಜುನ್ ಸರ್ಜಾ ಕಳಿಸಿರುವ ಆಹ್ವಾನದ ಸಾರಾಂಶ ಈ ರೀತಿ ಇದೆ.
"ವಿಧಿಯಾಟದ ಮುಂದೆ ಏನೂ ಇಲ್ಲ ಎಂಬುದು ನಮ್ಮ ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಮತ್ತಷ್ಟು ಮನದಟ್ಟಾಗಿದೆ. ನಮ್ಮ ಕುಟುಂಬದಲ್ಲಿ ಈ ರೀತಿಯ ಒಂದು ಸಂದರ್ಭ ಬರುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ನಮ್ಮ ಸುಖ ಹಾಗೂ ಕಷ್ಟ ಎರಡರಲ್ಲೂ ಮಾಧ್ಯಮದವರು ನಮ್ಮ ಜೊತೆಗಿದ್ದೀರಿ. ಜೂನ್ 17 ರ ಬುಧವಾರ ಬೆಳಗ್ಗೆ 10.30ಕ್ಕೆ ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್ನಲ್ಲಿ ಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯತಿಥಿಯನ್ನು ಹಮ್ಮಿಕೊಂಡಿದ್ದೇವೆ. ಅಂದು ತಾವು ಆಗಮಿಸಬೇಕೆಂದು ವಿನಂತಿ. ನಾವು, ನೀವು ಸೇರಿ ಚಿರು ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸೋಣ. ಇಂತಿ ನಿಮ್ಮಅರ್ಜುನ್ ಸರ್ಜಾ ಇದು ಕುಟುಂಬದ ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ಕ್ಯಾಮರಾಗಳನ್ನು ತರದೆ ದಯವಿಟ್ಟು ಸಹಕರಿಸಿ" ಎಂದು ಅರ್ಜುನ್ ಸರ್ಜಾ ಮನವಿ ಮಾಡುವ ಮೂಲಕ ನಾಳಿನ ಚಿರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.