ನಟ, ನಿರ್ದೇಶಕ ಹಾಗೂ ನಿರೂಪಕ ಮಾಸ್ಟರ್ ಆನಂದ್ ಗೊತ್ತಿಲ್ಲದವರಿಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಧಾರಾವಾಹಿ ನಿಗೂಢ ರಾತ್ರಿಯನ್ನು ಮಾಸ್ಟರ್ ಆನಂದ್ ನಿರ್ದೇಶಿಸಿದ್ದು, ಅದು 2019ರಲ್ಲಿ ಅಂತ್ಯಗೊಂಡಿತ್ತು. ನಿಗೂಢ ರಾತ್ರಿ ನಂತರ ನಿರ್ದೇಶನದಿಂದ ಬ್ರೇಕ್ ಪಡೆದುಕೊಂಡಿದ್ದ ಮಾಸ್ಟರ್ ಆನಂದ್ ಇದೀಗ ಒಂದು ವರ್ಷದ ಬಳಿಕ ಮಗದೊಮ್ಮೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.
ನಿರ್ದೇಶಕರಾಗಿ ಕಿರುತೆರೆಗೆ ಕಮ್ಬ್ಯಾಕ್ ಮಾಡಿದ ಮಾಸ್ಟರ್ ಆನಂದ್ - ಭೂಮಿಗೆ ಬಂದ ಭಾಗ್ಯವಂತ ಧಾರಾವಾಹಿ
ನಟ ಮಾಸ್ಟರ್ ಆನಂದ್ 'ಭೂಮಿಗೆ ಬಂದ ಭಾಗ್ಯವಂತ' ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಮತ್ತೆ ಲಾಂಗ್ ಗ್ಯಾಪ್ನ ನಂತರ ಕಿರುತೆರೆಗೆ ಮರಳಿದ್ದಾರೆ.
'ಭೂಮಿಗೆ ಬಂದ ಭಾಗ್ಯವಂತ' ಧಾರಾವಾಹಿ ಮೂಲಕ ನಿರ್ದೇಶಕರಾಗಿ ಲಾಂಗ್ ಗ್ಯಾಪ್ನ ನಂತರ ಕಿರುತೆರೆಗೆ ಮರಳಿರುವ ಮಾಸ್ಟರ್, "ಸಾಮಾನ್ಯವಾಗಿ ನಾನು ಧಾರಾವಾಹಿ ನಿರ್ದೇಶಿಸುತ್ತಿದ್ದೇನೆ ಎಂದರೆ ಅದು ಕಾಮಿಡಿ ಆಗಿರುತ್ತದೆ ಎಂದೇ ಹಲವರು ಊಹಿಸುತ್ತಾರೆ. ಆದರೆ ಈ ಬಾರಿ ನಾನು ಸಮಾಜಕ್ಕೆ ಸಂಬಂಧಪಟ್ಟ ವಿಷಯ ಕೈಗೆತ್ತಿಕೊಂಡಿರುವೆ. ಈ ಧಾರಾವಾಹಿಯು ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಹಾಸ್ಯವನ್ನು ಒಳಗೊಂಡಿದೆ. ಮಾತ್ರವಲ್ಲ ಇದರ ಜೊತೆಗೆ ನಾನು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಇದರ ಹೊರತಾಗಿ "ಹೊಸ ಧಾರಾವಾಹಿಗಾಗಿ ಕೊಪ್ಪ ಹಾಗೂ ಶೃಂಗೇರಿಯಲ್ಲಿ ಲೊಕೇಷನ್ ಹುಡುಕುತ್ತಿದ್ದೇನೆ. ಎಲ್ಲದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ ಈ ಧಾರಾವಾಹಿಯ ಹೈಲೈಟ್ ಏನೆಂದರೆ ಈ ಧಾರವಾಹಿಯ ಪ್ರಸಾರದ ಸಮಯವನ್ನು ನಾನು ಈಗಾಗಲೇ ನಿಗದಿ ಮಾಡಿರುವೆ. ಅಂದರೆ ನಾನು ಕಥೆಯನ್ನು ಕೇವಲ ಒಂದೂವರೆ ವರ್ಷದಲ್ಲಿ ಹೇಳಿ ಮುಗಿಸುವೆನೆಂಬ ವಿಶ್ವಾಸ ಹೊಂದಿರುವೆ. ಇನ್ನು ಇದೆಲ್ಲದರ ಹೊರತಾಗಿ ಈ ಧಾರಾವಾಹಿಯಲ್ಲಿ ಹೊಸ ಪ್ರತಿಭೆಗಳು ನಟಿಸಲಿದ್ದಾರೆ" ಎಂದು ಹೇಳಿದ್ದಾರೆ.