ಕೊರೊನಾ ಲಾಕ್ಡೌನ್ ಸಡಿಲಿಕೆ ನಂತರ ಬಿಡುಗಡೆಯಾಗಿ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ ಚಿತ್ರ 'ಆಕ್ಟ್ 1978'. ಕನ್ನಡ ಚಿತ್ರರಂಗದಲ್ಲಿ ಯಾವುದೇ ಹೊಸ ಸಿನಿಮಾ ರಿಲೀಸ್ ಆಗದ ಸಮಯದಲ್ಲಿ ತೆರೆಕಂಡ 'ಆಕ್ಟ್ 1978' ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವ ಮೂಲಕ 25 ದಿನಗಳನ್ನು ಪೂರೈಸಿ, 50ನೇ ದಿನದತ್ತ ದಾಪುಗಾಲು ಇಡುತ್ತಿದೆ.
ಸಿನಿಮಾ 25 ದಿನಗಳನ್ನು ಪೂರೈಸಿದ ಈ ಸಂಭ್ರಮವನ್ನು ಆಚರಿಸಲು ನಿರ್ದೇಶಕ ಮಂಸೋರೆ, ನಟರಾದ ಪ್ರಮೋದ್ ಶೆಟ್ಟಿ, ಬಿ. ಸುರೇಶ್, ಸಂಚಾರಿ ವಿಜಯ್, ದತ್ತಣ್ಣ, ನಟಿ ಶರಣ್ಯ, ರಘು ಶಿವಮೊಗ್ಗ, ಕಥೆಗಾರ ವೀರೇಂದ್ರ ಮಲ್ಲಣ್ಣ, ಛಾಯಾಗ್ರಹಕ ಸತ್ಯ ಹೆಗ್ಗಡೆ ಹಾಗೂ ನಿರ್ಮಾಪಕ ದೇವರಾಜ್ ಸೇರಿದಂತೆ ಚಿತ್ರತಂಡದ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಹಿರಿಯ ನಟ ಬಿ.ಸುರೇಶ್ ಮಾತನಾಡಿ, ಕೊರೊನಾ ಸಮಯದಲ್ಲಿ ಈ ಸಿನಿಮಾ ಬಿಡುಗಡೆಯಾಗಿರುವುದು ಚಿತ್ರರಂಗಕ್ಕೆ ಒಂದು ದಾರಿ ದೀಪವಾಗಿದೆ ಎಂದರು. ಸಂಚಾರಿ ವಿಜಯ್ ಮಾತನಾಡಿ, ಮಲ್ಟಿಪ್ಲೆಕ್ಸ್ನಲ್ಲಿ ಮತ್ತೆ ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಮೋದ್ ಶೆಟ್ಟಿ ಮಾತನಾಡಿ, ಕನ್ನಡದ ಎಲ್ಲಾ ಸ್ಟಾರ್ಗಳು ಈ ಸಿನಿಮಾಗೆ ಬೆಂಬಲ ನೀಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಥೆಗಾರ ವೀರೇಂದ್ರಮಲ್ಲಣ್ಣ, ನಿರ್ದೇಶಕ ಮಂಸೋರೆ, ನಿರ್ಮಾಪಕ ದೇವರಾಜು ಮಾತನಾಡಿ ಸಿನಿಮಾ ಯಶಸ್ಸಿಗೆ ಪ್ರೇಕ್ಷಕರು ಕಾರಣ ಎಂದು ಧನ್ಯವಾದ ಅರ್ಪಿಸಿದರು.