ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಮೂರನೇ ಸಿನಿಮಾ 'ಪ್ರಾರಂಭ' ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯಕ್ಕೆ ಚಿತ್ರತಂಡ ಪ್ರಾರಂಭ ಸಿನಿಮಾದ ಟೀಸರ್ ಬಿಡುಗಡೆ ಮಾಡಿದೆ.
ಅರ್ಜುನ್ ರೆಡ್ಡಿ ಸಿನಿಮಾ ನೆನಪಿಸುತ್ತಿದೆ ಮನೋರಂಜನ್ 'ಪ್ರಾರಂಭ' ಟೀಸರ್! - ಅರ್ಜುನ್ ರೆಡ್ಡಿ ಸಿನಿಮಾ
ಜಗದೀಶ್ ಕಲ್ಯಾಡಿ ನಿರ್ದೇಶನದಲ್ಲಿ ಮನೋರಂಜನ್ ನಟಿಸಿರುವ 'ಪ್ರಾರಂಭ' ಸಿನಿಮಾದ ಟೀಸರನ್ನು ಶನಿವಾರ ಚಿತ್ರತಂಡ ಬಿಡುಗಡೆ ಮಾಡಿದೆ. ಟೀಸರ್ ನೋಡಿದರೆ ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾ ನೆನಪಾಗುತ್ತದೆ. ಜೇನುಶ್ರೀ ತನುಷ ಪ್ರೊಡಕ್ಷನ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗುತ್ತಿದೆ.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮನೋರಂಜನ್, ನಿರ್ದೇಶಕ ಮನು ಕಲ್ಯಾಡಿ, ನಟಿ ಕೀರ್ತಿ ಕಲ್ಕೇಕರಿ, ನಿರ್ಮಾಪಕ ಜಗದೀಶ್ ಕಲ್ಯಾಡಿ ಸೇರಿ ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು. ದರ್ಶನ್ ಧ್ವನಿಯಿಂದಲೇ ಈ ಟೀಸರ್ ಆರಂಭವಾಗುತ್ತದೆ. ಪ್ರೇಮ ವೈಫಲ್ಯವಾದ ನಾಯಕ ಹೇಗೆ ಹೊಸ ಜರ್ನಿ ಆರಂಭಿಸುತ್ತಾನೆ ಎನ್ನುವುದು ಈ ಚಿತ್ರದ ಕಥೆ. ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ರಘು ಶ್ರೀವಾತ್ಸವ್, ಶಾಂಭವಿ, ಸೂರಜ್ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಹಾಗೂ ಇನ್ನಿತರ ಸ್ಥಳಗಳಲ್ಲಿ 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಮನು ಕಲ್ಯಾಡಿ ಕಥೆ, ನಿರ್ದೇಶನವಿರುವ ಈ ಚಿತ್ರವನ್ನು ಜಗದೀಶ್ ಕಲ್ಯಾಡಿ ನಿರ್ಮಿಸಿದ್ದಾರೆ. ಜೇನುಶ್ರೀ ತನುಷ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದ 5 ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತ ನೀಡಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಎನ್. ಕುಮಾರ್ ಸಂಕಲನ, ಸಂತು ಹಾಗೂ ಗೀತಾ ನೃತ್ಯ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಂತೋಷ್ ನಾಯಕ್ ಹಾಡುಗಳನ್ನು ಬರೆದಿದ್ದಾರೆ. ಚಿತ್ರದ ಟೀಸರ್ ನೋಡಿದರೆ ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾ ನೆನಪಾಗುತ್ತದೆ. ಆದರೆ ಅರ್ಜುನ್ ರೆಡ್ಡಿ ಸಿನಿಮಾದ ಒಂದು ಎಳೆಯೂ ನಮ್ಮ ಸಿನಿಮಾದಲ್ಲಿ ಇಲ್ಲ ಎಂದು ಮನೋರಂಜನ್ ಹೇಳಿದ್ದಾರೆ. ಒಟ್ಟಿನಲ್ಲಿ ಚಿತ್ರ ಬಿಡುಗಡೆಯಾಗುವವರೆಗೂ ಕಾಯಲೇಬೇಕು.