ಮಂಜು ಪಾವಗಡ ಸುದೀರ್ಘ 120 ದಿನಗಳ ಕಾಲ ನಡೆದ ಬಿಗ್ ಬಾಸ್ ಸೀಸನ್ 8ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬೈಕರ್ ಕೆ ಪಿ ಅರವಿಂದ್ ರನ್ನರ್ ಅಪ್ ಆದರೆ, ದಿವ್ಯಾ ಉರುಡುಗ 3ನೇ ಸ್ಥಾನ ಪಡೆದಿದ್ದಾರೆ. ಬಿಗ್ ಬಾಸ್ ಗೆಲ್ಲಬೇಕೆಂಬ ಅಚಲ ಮನೋಭಾವನೆಯೊಂದಿಗೆ ಮನೆಯೊಳಗೆ ಬಂದಿದ್ದ ಮಂಜು ಪಾವಗಡ ಕೊನೆಯವರೆಗೂ ತಮ್ಮ ಹೋರಾಟದ ಪ್ರದರ್ಶನ ಕಾಯ್ದುಕೊಂಡು ಉಳಿದ ಸ್ಪರ್ಧಿಗಳಿಗಿಂತ ಮುಂಚೂಣಿಯಲ್ಲಿದ್ದರು.
ಲಾಕ್ಡೌನ್ನಿಂದಾಗಿ ಬಿಗ್‌ಬಾಸ್ ರದ್ದಾಗಿದ್ದು ಮಂಜು ಅವರಲ್ಲಿ ತುಂಬಾ ನೋವುಂಟು ಮಾಡಿತ್ತು. ನಾನು ಈ ಬಾರಿ ಬಿಗ್‌ಬಾಸ್ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿತ್ತು. ಅರ್ಧಕ್ಕೆ ನಿಂತಿದ್ದು, ತುಂಬಾ ನೋವುಂಟು ಮಾಡಿದೆ ಎಂದು ನೊಂದುಕೊಂಡಿದ್ದರು. ಆದರೆ, ಬಿಗ್ಬಾಸ್ನ ಸೆಕೆಂಡ್ಸ್ ಇನ್ನಿಂಗ್ಸ್ನಲ್ಲಿ ಹೆಚ್ಚು ಮನರಂಜನೆ ನೀಡುತ್ತಾ, ಟಾಸ್ಕ್ ಮಾಡುತ್ತಾ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದ್ದರು ಮಂಜು ಪಾವಗಡ.
ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ಗಳಲ್ಲಿ ಮಂಜು ಪಾವಗಡ ಅತ್ಯುತ್ತಮ ಪ್ರದರ್ಶನ ನೀಡಿದರು. ಅಲ್ಲದೆ ಕ್ಯಾಪ್ಟನ್ ಆಗಿಯೂ ಕೂಡ ಅವರ ನಾಯಕತ್ವ ಎಲ್ಲರಿಗೂ ಇಷ್ಟವಾಗಿತ್ತು. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಮಂಜು, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಕೇವಲ ಆಟದ ಕಡೆ ಗಮನ ಹರಿಸಿದ್ದರು. ಹೀಗಾಗಿ, ಮಂಜು ಅವರು ವೈಯಕ್ತಿಕವಾಗಿ ಹಾಗೂ ಸ್ವತಂತ್ರವಾಗಿ ತಮ್ಮ ಆಟವನ್ನು ಬಿಗ್ ಬಾಸ್ ಮನೆಯಲ್ಲಿ ಕೊನೆಯ ದಿನದವರೆಗೂ ನಡೆಸಿದ್ದಾರೆ.
ಇವರಿಗೆ ಮೊದಲಿನಿಂದಲೂ ಅರವಿಂದ್ ಹಾಗೂ ದಿವ್ಯಾ ಉರುಡುಗ ಟಫ್ ಕಾಂಪಿಟೇಟರ್ ಆಗಿದ್ದರು. ಆದರೂ ಯಾವುದನ್ನು ಹೆಚ್ಚಾಗಿ ಮನಸ್ಸಿಗೆ ತೆಗೆದುಕೊಳ್ಳದೇ ಆಟದ ಮೇಲೆ ಹೆಚ್ಚು ಗಮನ ನೀಡುವ ಮೂಲಕ ಮಂಜು ಪಾವಗಡ ವಿಜಯ ಪತಾಕೆ ಹಾರಿಸಿದ್ದಾರೆ.