ಕರ್ನಾಟಕ

karnataka

By

Published : Apr 16, 2020, 10:12 AM IST

ETV Bharat / sitara

ಸಹ ಕಲಾವಿದರ ದುಸ್ಥಿತಿ ಕಂಡು ಕಣ್ಣೀರಿಟ್ಟ ಮಾಳವಿಕಾ ಅವಿನಾಶ್

ಟಾಸ್ಕ್ ಫೋರ್ಸ್ ಮುಖ್ಯಸ್ಥೆ ಆಗಿ ಕಾರ್ಯ ನಿರ್ವಾಹಿಸುತ್ತಿರುವ ಮಾಳವಿಕಾ ಅವಿನಾಶ್ ಅವರು ತಮ್ಮ ಸಹ ಕಲಾವಿದರ ಸಮಸ್ಯೆಯನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಳವಿಕಾ ಅವಿನಾಶ್
ಮಾಳವಿಕಾ ಅವಿನಾಶ್

ಸದಾ ಚಟುವಟಿಕೆಯಿಂದ ಇರುವ ಬಹುಮುಖಿ ಹಾಗೂ ಭಾವ ಜೀವಿ ಮಾಳವಿಕಾ ಅವಿನಾಶ್ ‘ಕೋವಿಡ್​-19’ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ಮುಖ್ಯಸ್ಥೆ ಆಗಿ ಅನೇಕ ಕಡೆ ತಿರುಗಾಡಿ ಸರ್ಕಾರದ ಸವಲತ್ತುಗಳು ಸರಿಯಾಗಿ ಲಭ್ಯ ಆಗುತ್ತಿದೆಯಾ ಅಂತ ನೋಡಿಕೊಳ್ಳುತ್ತಿದ್ದಾರೆ.

ಮೊನ್ನೆ ತಮ್ಮ ‘ಟಾಸ್ಕ್ ಫೋರ್ಸ್’ ಕೆಲಸದಲ್ಲಿ ತೊಡಗಿಕೊಂಡಿದ್ದ ಮಾಳವಿಕಾ ಅವರು ತಮ್ಮ ಜೊತೆ ಕೆಲಸ ಮಾಡಿದ ಸಹ ಕಲಾವಿದರುಗಳಿಗೆ, ಕಿರುತೆರೆ ಹಾಗೂ ಸಿನಿಮಾ ಮಂದಿಗಳನ್ನು ಸಂಪರ್ಕಿಸಿ ಅವರ ಸಮಸ್ಯೆಗೆ ಸ್ಪಂದಿಸಿದರು. ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟರೆ ರಾತ್ರಿ 8 ಗಂಟೆಗೆ ಅವರು ಮನೆ ತಲುಪುತ್ತಾರೆ. ಈ ಸಮಯದಲ್ಲಿ ಮಗನ ಲಾಲನೆ-ಪಾಲನೆಯ ಎಲ್ಲಾ ಜವಾಬ್ದಾರಿಯನ್ನು ಅವರ ಪತಿ, ಹಿರಿಯ ನಟ ಅವಿನಾಶ್ ಅವರೇ ನೋಡಿಕೊಳ್ಳುತ್ತಿರುವುದು ವಿಶೇಷ.

ಮಾಳವಿಕ ಅವಿನಾಶ್​ 9 ವರ್ಷ ಇದ್ದಾಗಲೇ ನಟನಾ ರಂಗಕ್ಕೆ ಕಾಲಿಟ್ಟಿದ್ದು ಸಿನಿಮಾ, ಕಿರುತೆರೆ ಅಲ್ಲದೆ ಅವರು ವಕೀಲೆ, ರಾಜಕೀಯ ಕ್ಷೇತ್ರದಲ್ಲೂ ಸಹ ಹೆಸರು ಮಾಡಿದ್ದಾರೆ. ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಡಾ. ಜಯಲಲಿತಾ ಒಮ್ಮೆ ಮಾಳವಿಕಾ ಅವಿನಾಶ್ ಅವರನ್ನು ತಮ್ಮ ಪಕ್ಷಕ್ಕೆ ಬಂದು ಸೇರಿಕೊಳ್ಳಿ ಎಂದು ಆಹ್ವಾನ ಸಹ ನೀಡಿದ್ದರು. ಆದರೆ ಮಾಳವಿಕಾ ಅವಿನಾಶ್ ಒಲವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶೋತ್ತರಗಳ ಕಡೆಗೆ ಇತ್ತು.

ನಾನು ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ, ಸತ್ತವರ ಮನೆಗೂ ಸಹ ಹೋಗಿ ಸಾಂತ್ವನ ಹೇಳಿ ಬಂದಿದ್ದೇನೆ. ಆದರೆ ನನ್ನ ಜೊತೆ ಕೆಲಸ ಮಾಡಿದ ಅನೇಕ ಸಹ ಕಲಾವಿದರುಗಳು ಮತ್ತು ತಂತ್ರಜ್ಞರ ಮುಂದೆ ನಿಂತಾಗ ನನ್ನ ಕಣ್ಣೀರು ತಾನಾಗೆ ಹರಿದು ಬಂತು. ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಜೊತೆ ಕೆಲಸ ಮಾಡಿದವರು ಯಾವ ರೀತಿಯ ಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಅರಿವಾಯಿತು. ವೃತ್ತಿಯಲ್ಲಿ ನನ್ನ ಜೊತೆ ಅಭಿನಯಕ್ಕೆ ಸಹಕರಿಸಿದವರು ಈಗ ಅಸಹಾಯಕರಾಗಿರುವುದನ್ನು ಕಂಡು ತುಂಬಾ ಬೇಜಾರಾಯಿತು ಎಂದು ತಮ್ಮ ಫೇಸ್​ಬುಕ್​ನಲ್ಲಿ ಮಾಳವಿಕಾ ಬರೆದುಕೊಂಡಿದ್ದಾರೆ.

ಆಹಾರದ ಕಿಟ್ ವಿತರಣೆ ಮಾಡುವಾಗ ನನ್ನ ಸಹೋದ್ಯೋಗಿಗಳನ್ನು ನೋಡಿ ನಾನು ದುಃಖಿತಳಾದೆ. ಅವರ ಮುಖದಲ್ಲಿ ಒಂದು ಸಣ್ಣ ಖುಷಿ ಸಹ ಕಂಡೆ ಎಂದು ಹೇಳಿಕೊಂಡಿರುವ ಮಾಳವಿಕಾ, ಜಗತ್ತಿನಲ್ಲಿ ಎಲ್ಲರಿಗೆ ಒಳ್ಳೆಯ ಸಮಯ ಬೇಗ ಬರಲಿ ಎಂದು ಆ ಕ್ಷಣದಲ್ಲಿ ಪ್ರಾರ್ಥಿಸಿಕೊಂಡೆ ಎಂದು ತಿಳಿಸಿದ್ದಾರೆ.

ತನ್ನ ಜೊತೆ ಕೆಲಸ ಮಾಡಿದ ಸಹ ಕಲಾವಿದರುಗಳಿಗೆ ಆಹಾರದ ಕಿಟ್ ನೀಡಿ ಬಂದ ಮೇಲೆ 10 ನಿಮಿಷ ಮಾಳವಿಕಾ ಅವಿನಾಶ್ ಘಾಡವಾದ ಯೋಚನೆಯಲ್ಲಿ ಕುಳಿತು ಬಿಟ್ಟರಂತೆ. ಈ ಸಮಯದಲ್ಲಿ ಅವರ ನೆಚ್ಚಿನ ಟಿ.ಎನ್. ಸೀತಾರಾಂ ಅವರ ಜೊತೆ ದೂರವಾಣಿ ಮುಖಾಂತರ ಮಾತನಾಡಿದ್ದಾರೆ. ಸಹಕಲಾವಿದರ ಈ ದುಸ್ಥಿತಿ ನೋಡಿ ಬೇಸರವಾಗಿದ್ದು, ‘ಯಾವ ಶತ್ರುವಿಗೂ ಈ ಅನುಭವ ಬೇಡ’ ಎಂದು ಮಾಳವಿಕಾ ಅವಿನಾಶ್ ಬರೆದುಕೊಂಡಿದ್ದಾರೆ.

ABOUT THE AUTHOR

...view details