ಸ್ಯಾಂಡಲ್ವುಡ್ನಲ್ಲಿ ಹೈಬಜೆಟ್ ಸಿನಿಮಾ ಹುಟ್ಟುಹಾಕುವ ಮೂಲಕ 'ಕೋಟಿ ನಿರ್ಮಾಪಕ' ಎಂದು ಕರೆಸಿಕೊಂಡಿರುವ ರಾಮು ಏಪ್ರಿಲ್ 26 ರಂದು ಕೋವಿಡ್ಗೆ ಬಲಿಯಾದರು. ಇಡೀ ಚಿತ್ರರಂಗವೇ ರಾಮು ಅಗಲಿಕೆಗೆ ಕಂಬನಿ ಮಿಡಿದಿತ್ತು. ಪತ್ನಿ ನಟಿ ಮಾಲಾಶ್ರೀ ಮತ್ತು ಮಕ್ಕಳು ದುಃಖದಲ್ಲಿಯೇ ಮರುಗುವಂತಾಯಿತು.
ಕನ್ನಡ ಚಿತ್ರರಂಗದ ಅನ್ಯೋನ್ಯ ದಂಪತಿಗಳಲ್ಲಿ ರಾಮು ಮತ್ತು ಮಾಲಾಶ್ರಿ ಜೋಡಿಯೂ ಒಂದು. ಎರಡು ದಶಕಗಳ ಹಿಂದೆ ಪ್ರಾರಂಭವಾದ ಇವರ ದಾಂಪತ್ಯ ಸಾಗಿ ಬಂದ ಹಾದಿ ಅನುಕರಣೀಯ. ನಿನ್ನೆ (ಜೂ.20) ಕೋಟಿ ರಾಮು ಅವರ ಜನ್ಮದಿನ. ರಾಮು ಅವರನ್ನು ಒಂದಲ್ಲೊಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೇ ಇರುವ ಮಾಲಾಶ್ರೀ, ಪ್ರೀತಿಯ ಪತಿಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
ಮಾಲಾಶ್ರೀ ಬರೆದ ಪತ್ರದಲ್ಲೇನಿದೆ?:
"Happy Birthday My Soul, ನೀವು ನನಗೆ ದೇವರ ವರವಾಗಿ ಬಂದ್ರಿ. ನೀವು ನನಗೆ ವರಗಳನ್ನು ಕೊಡುವ ದೇವರಾದ್ರಿ. ಈ ದಿನ ನನ್ನ ದೇವರ ಹುಟ್ಟುಹಬ್ಬ."
ಮಾಲಾಶ್ರೀ-ರಾಮು ಬದುಕಿನ ಸುಂದರ ಕ್ಷಣಗಳು
"23 ವರ್ಷಗಳ ಕಾಲ ಈ ನಿಮ್ಮ ಹುಟ್ಟುಹಬ್ಬವನ್ನ ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸಿ ನನ್ನ ಉಸಿರಲ್ಲಿ ಉಸಿರಾಗ್ತಾ ಬಂದ್ರಿ. ನನ್ನ ದಿನ ನೀವಾಗಿದ್ರಿ, ನನ್ನ ನಡೆ ನೀವಾಗಿದ್ರಿ, ನನ್ನ ನುಡಿ-ನಗು-ನೆಮ್ಮದಿ ನೀವಾಗಿದ್ರಿ. ನನ್ನ ಹೆಸರಿಗೆ ಬೆಳಕಾಗಿದ್ರಿ.
ದಿನ ರಾತ್ರಿ ನನ್ನ ಆಗು-ಹೋಗುಗಳನ್ನ ಆಲಿಸಿ, ನನಗೆ ಬುದ್ಧಿ ಹೇಳಿ, ಬದುಕು ಬುನಾದಿ ಕಟ್ಟಿ ಕೊಟ್ಟ ಗುರುಗಳಾದ್ರಿ. ಮಕ್ಕಳ ಬದುಕನ್ನು, ಅವರ ಜೀವನ್ನು ಹಸನಾಗಿ ರೂಪಿಸಿದ Perfect Father ಆಗಿದ್ರಿ. You were a man of different dimensions, a devoted, caring, dedicated, determined and wise soul."
"ನೀವು ದೂರವಾದ ಆ ಕ್ಷಣದಿಂದ ಈ ಸಾಲುಗಳನ್ನು ಬರೆಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೆ ಇದೆ. I am missing you so much. ನನಗಾಗೆ ಜನುಮ ಪಡೆದು ಬಂದ ನನ್ನ ಹೃದಯ ನೀವು. ನನಗೆ ಏನೇನು ಬೇಕೋ ಅದೆಲ್ಲ ಕೊಟ್ಟ ನಿಮಗೆ, ಆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡ್ತೀನಿ. We miss you and love you forever."