ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 25ನೇ ಸಿನಿಮಾ 'ಮಹರ್ಷಿ' ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕಥೆ ಎಲ್ಲರನ್ನು ಸೆಳೆಯುತ್ತಿದ್ದು, ಚಿತ್ರದ ಕುರಿತು ಉಪ ರಾಷ್ಟ್ರಪತಿ ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಹೌದು, ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕುಟುಂಬ ಸಮೇತವಾಗಿ 'ಮಹರ್ಷಿ' ಚಿತ್ರ ವೀಕ್ಷಿಸಿದ್ದು, ಗ್ರಾಮೀಣ ಕಥಾವಸ್ತು, ವ್ಯವಸಾಯದ ಸಂರಕ್ಷಣೆ ಹಾಗೂ ಅನ್ನದಾತರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಾರುವ ಚಿತ್ರ ಇದಾಗಿದೆ. ಪ್ರತಿಯೊಬ್ಬರು ನೋಡಬಹುದಾದ ಉತ್ತಮ ಚಿತ್ರ ಎಂದು ಬರೆದುಕೊಂಡಿದ್ದಾರೆ.
ವ್ಯವಸಾಯದ ಪ್ರಾಧಾನ್ಯತೆಯನ್ನು ಎತ್ತಿ ಹಿಡಿಯುವ ಚಿತ್ರ 'ಮಹರ್ಷಿ'. ಇಂತಹ ಚಿತ್ರದಲ್ಲಿ ಸಹಜವಾಗಿ ನಟಿಸಿರುವ ನಾಯಕ ಮಹೇಶ್ ಬಾಬು, ನಿರ್ದೇಶಕ ವಂಶಿ ಪೈಡಿಪಲ್ಲಿ ಹಾಗೂ ನಿರ್ಮಾಪಕರಿಗೆ ಅಭಿನಂದನೆ ತಿಳಿಸಿದ್ದಾರೆ.
ಚಿತ್ರದ ಯಶಸ್ಸಿನಿಂದ ಖುಷಿಯಲ್ಲಿ ತೇಲುತ್ತಿರುವ ಚಿತ್ರತಂಡ ಸಕ್ಸಸ್ ಮೀಟ್ ಸಹ ನಡೆಸಿದೆ. ಇನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಪ್ರತಿಕ್ರಿಯೆಗೆ ಸ್ಪಂದಿಸಿರುವ ಪ್ರಿನ್ಸ್ ಮಹೇಶ್ ಬಾಬು, ತಂಡದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಗಳಿಕೆಯಲ್ಲೂ ಮುನ್ನುಗ್ಗುತ್ತಿರುವ ಮಹರ್ಷಿ, 4 ದಿನಗಳಲ್ಲಿ 100 ಕೋಟಿ ಗಳಿಸಿದೆ.
ವಂಶಿ ಪೈಡಿಪಲ್ಲಿ ನಿರ್ದೇಶನದ 'ಮಹರ್ಷಿ' ಸಿನಿಮಾವನ್ನು ವೈಜಯಂತಿ ಮೂವೀಸ್, ಶ್ರೀವೆಂಕಟೇಶ್ವರ ಕ್ರಿಯೇಶನ್ಸ್, ಪಿವಿಪಿ ಸಿನಿಮಾ ಜೊತೆ ಸೇರಿ ನಿರ್ಮಿಸಿದ್ದಾರೆ. ಪೂಜಾಹೆಗ್ಡೆ, ಅಲ್ಲರಿ ನರೇಶ್, ಜಗಪತಿ ಬಾಬು, ಪ್ರಕಾಶ್ ರಾಜ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.