ಗುಂಡ್ಲುಪೇಟೆ:ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡಾ ಏರಿಕೆಯಾಗುತ್ತಲೇ ಇದೆ. ಲಾಕ್ಡೌನ್ ತೆರವುಗೊಳಿಸಿರುವುದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹೊರಬರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ನಿಯಮ ಮಾಡಿದೆ.
ಕೋವಿಡ್-19 ನಿಯಮ ಉಲ್ಲಂಘಿಸಿದ 'ಮದಗಜ' ಚಿತ್ರತಂಡ - Mahesh kumar direction Madagaja
ಶ್ರೀ ಮುರಳಿ ಅಭಿನಯದ 'ಮದಗಜ' ಚಿತ್ರೀಕರಣ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆಯುತ್ತಿದ್ದು ಚಿತ್ರತಂಡ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದೆ. ಚಿತ್ರೀಕರಣ ನೋಡಲು ಗುಂಪು ಗುಂಪಾಗಿ ಜನರು ಬಂದರೂ ಅವರನ್ನು ನಿಯಂತ್ರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
![ಕೋವಿಡ್-19 ನಿಯಮ ಉಲ್ಲಂಘಿಸಿದ 'ಮದಗಜ' ಚಿತ್ರತಂಡ Violation of Covide-19 rules](https://etvbharatimages.akamaized.net/etvbharat/prod-images/768-512-9055570-151-9055570-1601887790961.jpg)
ಇನ್ನು ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. ಕೆಲವೆಡೆ ಕೋವಿಡ್-19 ನಿಯಮಾವಳಿಗಳನ್ನು ಪಾಲಿಸುವ ಮೂಲಕ ಚಿತ್ರೀಕರಣ ನಡೆಸುತ್ತಿದ್ದರೆ. ಶ್ರಿ ಮುರಳಿ ಅಭಿನಯದ 'ಮದಗಜ' ಚಿತ್ರತಂಡ ಮಾತ್ರ ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣ ನಡೆಸುತ್ತಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ 'ಮದಗಜ' ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್ ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಗುಂಪು ಗುಂಪಾಗಿ ಜನರು ಆಗಮಿಸುತ್ತಿದ್ದಾರೆ. ಈ ವೇಳೆ 50 ಕ್ಕೂ ಹೆಚ್ಚು ಜೋಡಿ ಎತ್ತುಗಳನ್ನು ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗಿತ್ತು.
ಚಿತ್ರೀಕರಣ ನೋಡಲು ಬಂದವರು ಮಾಸ್ಕ್ ಧರಿಸಿದ್ದರೆ ಚಿತ್ರತಂಡದ ಕೆಲವು ಸದಸ್ಯರು ಬಂದು ಮಾಸ್ಕ್ ತೆಗೆಯಲು ಹೇಳುತ್ತಿದ್ದರು ಎಂದು ಕೆಲವರು ಆರೋಪಿಸಿದ್ದಾರೆ. "ಕೊರೊನಾ ಸೋಂಕು ದಿನೇ ದಿನೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿದರೆ ಸಮಸ್ಯೆ ಅನುಭವಿಸುವವರು ಗ್ರಾಮದ ಜನರು. ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಸರ್ಕಾರಿ ಅಧಿಕಾರಿಗಳು ಇದ್ದು ನಿಯಮ ಪಾಲಿಸುವಂತೆ ಸೂಚಿಸಿದರೆ ಮುಂದೆ ಉಂಟಾಗುವ ಅನಾಹುತ ತಪ್ಪಿಸಬಹುದು" ಎಂದು ರೈತ ಮುಖಂಡ ಹಂಗಳ ಮಹದೇವಪ್ಪ ತಿಳಿಸಿದರು.