ಮೈಸೂರು: ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಆಯೋಜಿಸಿದ್ದ 'ಲೋಕೇಶ್ ನೆನಪು' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಳೆದ ಭಾನುವಾರ ನಗರದಲ್ಲಿ ನಡೆದಿದೆ.
ಇಲ್ಲಿಯ ರಾಮಕೃಷ್ಣಪುರದಲ್ಲಿರುವ ನಟನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗದ ಮೂವರು ಗಣ್ಯರಿಗೆ ಲೋಕೇಶ್ ಕುಟುಂಬದ ಪ್ರಮುಖರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಬ್ಬಯ್ಯ ನಾಯ್ಡು (ಲೋಕೇಶ್ ಅವರ ತಂದೆ ಹಾಗೂ ಕನ್ನಡ ಚಿತ್ರರಂಗದ ಮೊದಲ ನಾಯಕ ) ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ, ರಂಗಾಸಕ್ತ ಚಿಂದೋಡಿ ಬಂಗಾರೇಶ್ ಅವರಿಗೆ, ಶ್ರೀಮತಿ ಲಕ್ಷ್ಮಿ ದೇವಮ್ಮ ಪ್ರಶಸ್ತಿಯನ್ನು ಹಿರಿಯ ನಟಿ ಶೈಲಶ್ರೀ ಸುದರ್ಶನ್ ಅವರಿಗೆ ಮತ್ತು ಲೋಕೇಶ್ ಪ್ರಶಸ್ತಿಯನ್ನು ರಂಗಭೂಮಿ, ಹಿರಿ ತೆರೆ ಹಾಗೂ ಕಿರು ತೆರೆಯ ಹಿರಿಯ ನಟ ರಮೇಶ್ ಭಟ್ ಅವರಿಗೆ ನೀಡಿ ಗೌರವಿಸಲಾಗಿದೆ.
ಹಿರಿಯ ರಂಗತಜ್ಞ ಶ್ರೀನಿವಾಸ್ ಜಿ. ಕಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಾ ಸಿಂಧುವಲ್ಲಿ, ಮಂಡ್ಯ ರಮೇಶ್ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ರಾಜಶೇಖರ್ ಕದಂಬ ಹಾಗೂ ಚಲನಚಿತ್ರ ಕಲಾವಿದ ಶಂಕರ್ ಅಶ್ವಥ್ ಅವರಿಗೆ ಗೌರವಿಸಲಾಯಿತು. ಲೋಕೇಶ್ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.