ಕೆಲವೊಂದು ಸಿನಿಮಾ ನಟರಿಗೆ 4-5 ವರ್ಷದ ಪುಟಾಣಿ ಅಭಿಮಾನಿಗಳು ಕೂಡಾ ಇರುತ್ತಾರೆ. ಹೀಗೆ ಪುಟ್ಟ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪುನೀತ್ ರಾಜ್ಕುಮಾರ್ ಮೊದಲಿಗೆ ನಿಲ್ಲುತ್ತಾರೆ.
ಪುನೀತ್ ಫೋಟೋಗೆ ಮುತ್ತಿಟ್ಟ ಪುಟಾಣಿ ಕಬೀರ್ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಅಪ್ಪು, ಅನೇಕ ಮಕ್ಕಳಿಗೆ ಬಹಳ ಇಷ್ಟ. ಚಿಕ್ಕ ವಯಸ್ಸಲ್ಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಅಪ್ಪುಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. 'ಜಟ್ಟಾ' ಹಾಗೂ 'ಮೈತ್ರಿ' ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿರುವ ನಿರ್ದೇಶಕ ಗಿರಿರಾಜ್ ಬಿ.ಎಮ್. ಅವರ ಮುದ್ದಿನ ಮಗ ಕಬೀರ್ ಕೂಡಾ ಅಪ್ಪು ಅವರ ಅಭಿಮಾನಿ.
2015ರಲ್ಲಿ ನಿರ್ದೇಶಕ ಗಿರಿರಾಜ್ ಪವರ್ ಸ್ಟಾರ್ ಜೊತೆ ಮಾಡಿದ್ದ 'ಮೈತ್ರಿ' ಸಿನಿಮಾ ಯಶಸ್ಸು ಕಂಡಿತ್ತು. 'ನಾಲ್ಕು ವರ್ಷಗಳ ಹಿಂದೆ ಅಪ್ಪು ಮನೆಗೆ ಮಗನೊಂದಿಗೆ ಹೋಗಿದ್ದೆ. ಅಲ್ಲಿ ಅಣ್ಣಾವ್ರ ಜೊತೆ ಇದ್ದ ಪುನೀತ್ ಅವರ ಬಾಲ್ಯದ ಫೋಟೋ ನೋಡಿ ನನ್ನ ಮಗ ಆ ಫೋಟೋಗೆ ಮುತ್ತು ಕೊಡಲು ಆರಂಭಿಸಿದ. ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ದೇವರು ಒಂದು ಮಗುವಾದ ಘಳಿಗೆ' ಎಂದು ಗಿರಿರಾಜ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಇಂದು ಗಿರಿರಾಜ್ ಪುತ್ರನ ಹುಟ್ಟುಹಬ್ಬವಾದ್ದರಿಂದ ಈ ವಿಶೇಷ ವಿಡಿಯೋವನ್ನು ಗಿರಿರಾಜ್ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಅನೇಕರು ಮೆಚ್ಚಿ ಕಮೆಂಟ್ಸ್ ಕೂಡಾ ಮಾಡಿದ್ದಾರೆ.