ಕೋಲ್ಕತಾ : ದೇಶದಲ್ಲಿ ದಲಿತ - ಮುಸ್ಲಿಂರ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಕಡಿವಾಣ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿಗೆ ನಟಿ, ನಿರ್ಮಾಪಕಿ ಅಪರ್ಣಾ ಸೇನ್ ಪತ್ರ ಬರೆದಿದ್ದಾರೆ.
ಗೋಸಂರಕ್ಷಣೆ ಹೆಸರಿನಲ್ಲಿ ಕೆಲವೊಂದಿಷ್ಟು ವರ್ಗದ ಜನರ ಮೇಲೆ ಮಾರಣಾಂತಿಕ ಗುಂಪು ದಾಳಿಯಾಗುತ್ತಿವೆ. ಜೈ ಶ್ರೀರಾಮ್ ಎನ್ನುವ ಘೋಷಣೆ ಯುದ್ಧ ಕೇಕೆಯಾಗಿ ಪರಿಣಮಿಸುತ್ತಿದೆ. ಇಂತಹ ಪ್ರಕರಣಗಳು ನಿಲ್ಲಬೇಕು ಎಂದು ಪತ್ರ ಮುಖೇನ ಆಗ್ರಹಿಸಿದ್ದಾರೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ವರದಿ ಪ್ರಕಾರ 2016 ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 840 ಕ್ಕೂ ಹೆಚ್ಚಿದೆ. ಇದನ್ನು ನೋಡಿ ಆಘಾತವಾಯಿತು. ಪ್ರಧಾನಿ ಮೋದಿಯವರು ಪಾರ್ಲಿಮೆಂಟ್ನಲ್ಲಿ ಹಲ್ಲೆಯ ಘಟನೆಗಳನ್ನು ಖಂಡಿಸಿದ್ದಾರೆ. ಆದರೆ, ಇಂತಹ ಪ್ರಕರಣಗಳನ್ನು ಜಾಮೀನು ರಹಿತ ಎಂದು ಪರಿಗಣಿಸಬೇಕು ಎಂದಿರುವ ಸೇನ್, ನಾವು ಕೇವಲ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಗಮನ ಸೆಳೆಯುತ್ತಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಪಕ್ಷಗಳನ್ನು ದೂರುತ್ತಿಲ್ಲ. ನಮ್ಮ ಪತ್ರಕ್ಕೆ ಯಾವುದೇ ರಾಜಕೀಯದ ಬಣ್ಣ ಅಂಟಿಲ್ಲ, ಪ್ರಧಾನಿಯವರು ಮಧ್ಯಪ್ರವೇಶಿಸಿ ದಲಿತರ ಮೇಲಿನ ಹಲ್ಲೆಗಳನ್ನು ತಡೆಗಟ್ಟಬೇಕೆಂಬುದಷ್ಟೆ ನಮ್ಮ ಉದ್ದೇಶ ಎಂದಿದ್ದಾರೆ.
ಯಾವುದೇ ನಿರ್ದಿಷ್ಟ ಸಮುದಾಯದ ಜನರ ಮೇಲೆ ನಡೆಯುತ್ತಿರುವ ಹಲ್ಲೆ ನಾವು ಖಂಡಿಸುತ್ತಿಲ್ಲ. ಆದರೆ, ಧರ್ಮ-ಜಾತಿಯನ್ನು ಲೆಕ್ಕಿಸದೇ ಮನುಷ್ಯರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ ಎಂದಿದ್ದಾರೆ. ಪಶ್ಚಿಮ ಬಂಗಾಳದ ಖ್ಯಾತ ನಟಿ ಅಪರ್ಣಾ ಸೇನ್ ಪತ್ರಕ್ಕೆ ಇತಿಹಾಸ ಬರಹಗಾರ ರಾಮಚಂದ್ರ ಗುಹಾ ಕೂಡ ಬೆಂಬಲಿಸಿ ಸಹಿ ಮಾಡಿದ್ದಾರೆ.