ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್ (Legendary Singer KJ Yesudas) ಅವರು ಸಂಗೀತ ಕ್ಷೇತ್ರದಲ್ಲಿ 60 ವರ್ಷಗಳನ್ನು ಪೂರೈಸಿದ (completes 60 years) ಹಿನ್ನೆಲೆಯಲ್ಲಿ ನಟ - ನಟಿಯರು ಸೇರಿದಂತೆ ದಿಗ್ಗಜ ಸೆಲೆಬ್ರಿಟಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.
ಯೇಸುದಾಸ್ ಅವರು ಹಾಡಿರುವ ಕೆಲವು ಚಿತ್ರದ ಹಾಡುಗಳನ್ನು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal) ಮತ್ತೆ ಮೆಲುಕು ಹಾಕಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಯೇಸುದಾಸ್ ಅವರು ಮಾಡಿರುವ ಸಾಧನೆ ಬಣ್ಣಿಸಿರುವ ಹಲವು ಸೆಲೆಬ್ರಿಟಿಗಳು ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ.
ನಟ ಮೋಹನ್‌ಲಾಲ್ ಮತ್ತು ಗಾಯಕ ಕೆ.ಜೆ.ಯೇಸುದಾಸ್
1962 ರಲ್ಲಿ 'ಜಾತಿ ಭೇದಂ ಮಠ ದ್ವೇಷಂ' (Jaathi Bhedam Matha Dwesham) ಎಂಬ ಹಾಡಿನಿಂದ ಪ್ರಾರಂಭವಾದ ಅವರ ಗಾಯನ, ಮಲೆಯಾಳಂ, ಕನ್ನಡ, ಹಿಂದಿ, ತಮಿಳು, ತೆಲುಗು, ಬಂಗಾಳಿ ಗುಜರಾತಿ, ಒಡಿಶಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು ಮತ್ತು ವಿದೇಶಿ ಭಾಷೆಗಳಾದ ರಷ್ಯನ್, ಅರೇಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್ ಸೇರಿದಂತೆ ಹತ್ತಾರು ಭಾಷೆಗಳಲ್ಲಿ 80,000ಕ್ಕೂ ಹೆಚ್ಚು ಹಾಡುಗಳನ್ನು ಯೇಸುದಾಸ್ ಹಾಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಜೀವಂತ ದಂತಕಥೆಯಾಗಿ ಭಾನುವಾರ ಯೇಸುದಾಸ್ ಅವರು 60 ವರ್ಷಗಳನ್ನು ಪೂರೈಸಿದರು. ಯೇಸುದಾಸ್ ಪದ್ಮವಿಭೂಷಣ ಪ್ರಶಸ್ತಿ (Padma Vibhushan) ಸೇರಿದಂತೆ ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ಏಳು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್
ಕನ್ನಡದಲ್ಲಿ ಪ್ರೇಮ ಲೊಕದಿಂದ ಬಂದ ಪ್ರೇಮದ ಸಂದೇಶ (ಪ್ರೇಮಲೋಕ), ಮನೆಯೇ ಮಂತ್ರಾಲಯ ಮನಸೇ ದೇವಾಲಯ (ಮನೆಯೇ ಮಂತ್ರಾಲಯ), ಎಲ್ಲೆಲ್ಲೂ ಸಂಗೀತವೇ, ಕೇಳುವ ಕಿವಿ ಇರಲು, ನೋಡುವ ಕಣ್ಣಿರಲು (ಮಲಯ ಮಾರುತ), ಯಾರೇ ನೀನು ಚೆಲುವೆ, ನಿನ್ನಷ್ಟಕ್ಕೆ ನೀನೆ ಏಕೆ ನಗುವೆ (ನಾನು ನನ್ನ ಹೆಂಡ್ತಿ), ನಾನು ಕನ್ನಡದ ಕಂದ, ಬಂದೆ ಶಾಂತಿಯ ನೆಲದಿಂದ (ಎಕೆ 47), ರಾಮಚಾರಿ ಹಾಡುವ ಲಾಲಿ ಹಾಡು ಕೇಳವ್ವ (ರಾಮಚಾರಿ) ಸೇರಿದಂತೆ ನೂರಾರು ಅತ್ಯದ್ಭುತ ಹಾಡುಗಳನ್ನು ಹಾಡಿ ಗಮನ ಸೆಳೆದಿದ್ದಾರೆ.