ಕಲರ್ಸ್ ಕನ್ನಡ ವಾಹಿನಿಯಲ್ಲಿ ಏಳು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯು ಈ ವರ್ಷದ ಆರಂಭದಲ್ಲಿ ಮುಕ್ತಾಯಗೊಂಡಿದೆ. ಏಳು ವರ್ಷಗಳಿಂದ ಜನರನ್ನು ಮನರಂಜಿಸುತ್ತಿದ್ದ ಈ ಧಾರಾವಾಹಿ ವಿಭಿನ್ನ ಕಥೆಯ ಮೂಲಕ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. ಧಾರಾವಾಹಿಯೇನೋ ಸುಖಾಂತ್ಯದ ಮೂಲಕ ಮುಕ್ತಾಯಗೊಂಡಿತು. ಆದರೆ, ಕಲಾವಿದರು? ಅವರೇನು ಮಾಡುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನ ನಾವು ನಿಮಗೆ ತಿಳಿಸಲಿದ್ದೇವೆ ನೋಡಿ.
ನೇಹಾ ಗೌಡ: ಏಳು ವರ್ಷಗಳಿಂದ ಗೊಂಬೆ ಅಲಿಯಾಸ್ ಶ್ರುತಿಯಾಗಿ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದ ನೇಹಾ ಗೌಡ ಈ ಮೊದಲು ಒಂದೆರಡು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಜನ ಅವರನ್ನು ಮೆಚ್ಚಿದ್ದು ಗೊಂಬೆಯಾಗಿ ಬದಲಾದ ಬಳಿಕವೇ! ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಸೆಳೆದ ನೇಹಾ ಗೌಡ, ಮುಂದೆ ಕಲರ್ಸ್ ಕನ್ನಡದಲ್ಲಿ ಆರಂಭವಾದ ಮೂರು ಗಂಟು ಧಾರಾವಾಹಿಯಲ್ಲಿನ ಶುಭವಿವಾಹ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಆ ಮೂಲಕ ನಿರೂಪಕಿಯಾಗಬೇಕು ಎಂಬ ತಮ್ಮ ಆಸೆಯನ್ನು ಪೂರೈಸಿಕೊಂಡರು.
ಚಂದು ಗೌಡ: ನಾಯಕ ಚಂದು ಆಗಿ ನಟಿಸಿರುವ ಚಂದು ಗೌಡ, ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಕೂಡಾ ತಮ್ಮ ನಟನಾ ಛಾಪು ಪಸರಿಸುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ತೆಲುಗು ಭಾಷೆಯ ತ್ರಿನಯಿನಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ.
ರಶ್ಮಿ ಪ್ರಭಾಕರ್:ಚಿನ್ನು ಅಲಿಯಾಸ್ ಲಕ್ಷ್ಮಿ ಆಗಿ ನಟಿಸುತ್ತಿದ್ದ ಕವಿತಾ ಗೌಡ ಪಾತ್ರಕ್ಕೆ ಬಾಯ್ ಹೇಳಿದಾಗ ಆ ಜಾಗಕ್ಕೆ ಬಂದವರೇ ರಶ್ಮಿ ಪ್ರಭಾಕರ್. ಜೀವನಚೈತ್ರ ಧಾರಾವಾಹಿಯಲ್ಲಿ ತಂಗಿಯಾಗಿ ನಟಿಸಿದ್ಧ ರಶ್ಮಿ, ನಾಯಕಿಯಾಗಿ ಕಾಣಿಸಿಕೊಂಡಿದ್ದು ಲಕ್ಷ್ಮಿ ಬಾರಮ್ಮ ಮೂಲಕ. ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ರಶ್ಮಿ ತೆಲುಗಿನ ಪೌರ್ಣಮಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.