ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಕೇವಲ ಗಾಯಕಿಯಾಗಿ ಮಾತ್ರವಲ್ಲದೇ, ನಟಿಯಾಗಿ ಕೂಡ ಅಭಿನಯಿಸಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್, ಮರಾಠಿ ಸಂಗೀತಗಾರ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಶೇವಂತಿ ದಂಪತಿಯ ಹಿರಿಯ ಮಗಳು. ಸೋದರ ಹೃದಯನಾಥ್ ಮಂಗೇಶ್ಕರ್, ಸಹೋದರಿಯರು ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್ ಹಾಗೂ ಆಶಾ ಭೋಸ್ಲೆ ಸಹ ಗಾಯನ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಕಂಠದಿಂದ ಎಲ್ಲರನ್ನು ಮೋಡಿ ಮಾಡಿರುವ ಲತಾ ಮಂಗೇಶ್ಕರ್, ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅಷ್ಟೇ ಅಲ್ಲದೆ, 1942ರಿಂದ 1948ರವರೆಗೆ ಎಂಟು ಚಲನಚಿತ್ರಗಳಲ್ಲಿ ನಟಿಸಿದ್ದಾರೆ .
1942ರಲ್ಲಿ ಮಾಸ್ಟರ್ ವಿನಾಯಕ್ ಅವರ ಮರಾಠಿ ಚಿತ್ರ 'ಪೆಹ್ಲಿ ಮಂಗಳ-ಗೌರ್'ನಲ್ಲಿ ಸಣ್ಣ ಪಾತ್ರವೊಂದನ್ನ ನಿರ್ವಹಿಸಿದ್ದರು. ಜೊತೆಗೆ ತಂಗಿ ಆಶಾ ಭೋಂಸ್ಲೆಯೊಂದಿಗೆ ವಿನಾಯಕ್ ನಟನೆಯ ಮೊದಲ ಹಿಂದಿ ಚಲನಚಿತ್ರ 'ಬಡಿ ಮಾ' (1945) ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.