ಮುದ್ದೇಬಿಹಾಳ(ವಿಜಯಪುರ): ಕನ್ನಡ ಭಾಷೆಯಲ್ಲಿ ಸಿನಿಮಾಗಳ ಮೂಲಕ ಉತ್ತಮ ಸಂದೇಶ ಬೀರಬೇಕು ಎಂಬ ಉದ್ದೇಶದಿಂದ ಲಕ್ಷ್ಯ ಚಿತ್ರ (lakshya Movie) ನಿರ್ಮಿಸಿದ್ದು ರಾಜ್ಯಾದ್ಯಂತ ನವೆಂಬರ್ 19ರಂದು ಚಿತ್ರ ತೆರೆಯ ಮೇಲೆ ಬಿಡುಗಡೆ ಆಗಲಿದೆ ಎಂದು ಮುದ್ದೇಬಿಹಾಳದ ಯುವ ನಿರ್ದೇಶಕ ರವಿ ಸಾಸನೂರ (Director Ravi Sasanuru) ಹೇಳಿದರು.
ಪಟ್ಟಣದ ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯ ಜವಾಬ್ದಾರಿಯುತ ಸಂದೇಶ ನೀಡುವ ಸಿನಿಮಾ ಮಾಡಿದ್ದೇವೆ. ಸಿನಿಮಾದಲ್ಲಿ ಒಳ್ಳೆಯ ಅಪ್ಪ ಅಮ್ಮ ಇದ್ದಾರೆ. ಭ್ರಷ್ಟ ಅಧಿಕಾರಿಗಳೂ ಇದ್ದಾರೆ. ಮನೆ ಮಂದಿ ಒಟ್ಟಿಗೆ ಕೂತು ಸಿನಿಮಾ ನೋಡಬಹುದಾಗಿದೆ. ಈ ಸಿನಿಮಾದ ಮೂಲಕ ಹೊಸತನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎಂದು ರವಿ ಸಾಸನೂರು ಹೇಳಿದ್ದಾರೆ.
ಬೆಳಗಾವಿ ಭಾಗದಲ್ಲಿ ಚಿತ್ರೀಕರಣ
ಚಿತ್ರದ ಸಹ ನಟ ಮಿಥುನ್.ಆರ್.ಪಿ ಮಾತನಾಡಿ, ಸಿನಿಮಾವನ್ನು ಗೋಕಾಕ್, ಬೆಳಗಾವಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಯುವ ಪೀಳಿಗೆಯ ಕೈಯ್ಯಲ್ಲಿ ಭವಿಷ್ಯವಿದೆ. ಜವಾಬ್ದಾರಿಯನ್ನು ಮರೆತಾಗ ಬುದ್ಧಿ ಕಲಿಸುವ ಪಾತ್ರವನ್ನು ನನಗೆ ನೀಡಲಾಗಿದೆ. ಒಟ್ಟಾರೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕ ಪ್ರಭುಗಳು ಚಿತ್ರ ನೋಡಿ ಆಶೀರ್ವದಿಸಬೇಕು ಎಂದು ಹೇಳಿದರು. ಇದೇ ವೇಳೆ ಸಂಕಲನಕಾರ ಶಿವಕುಮಾರ ಎ., ಚಿತ್ರ ತಂಡದ ಅನೀಲಕುಮಾರ ತೇಲಂಗಿ ಮಾತನಾಡಿದರು.