ಲೂಸಿಯಾ, ಡ್ರಾಮಾ, ಬ್ಯೂಟಿಫುಲ್ ಮನಸುಗಳು, ಕ್ವಾಟ್ಲೆ ಸತೀಶ, ಅಯೋಗ್ಯ ಹೀಗೆ ಸಾಲು ಸಾಲು ಸಿನಿಮಾಗಳ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದ ನೀನಾಸಂ ಸತೀಶ್ ಈಗ ಬ್ರಹ್ಮಚಾರಿ ಆಗಲು ಹೊರಟಿದ್ದಾರೆ.
ಅರೇ, ಮದುವೆಯಾಗಿರುವ ಸತೀಶ್ ಈಗ ಬ್ರಹ್ಮಚಾರಿಯಾಗಲು ಹೇಗೆ ಸಾಧ್ಯ ಎಂದು ಯೋಚಿಸಬೇಡಿ. ವಿಷಯ ತಿಳಿಯಲು ಮುಂದೆ ಓದಿ. ಕಳೆದ ತಿಂಗಳು ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆ ಕಂಡಿದ್ದ 'ಚಂಬಲ್' ಸಿನಿಮಾ ವಿಮರ್ಶಕರಿಂದ ಒಳ್ಳೇ ಪ್ರಶಂಸೆ ಗಳಿಸಿದ್ದರೂ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಷ್ಟು ಸದ್ದು ಮಾಡಿರಲಿಲ್ಲ. ಈ ಚಿತ್ರದ ಬಳಿಕ ಸತೀಶ್ ಯಾವ ಚಿತ್ರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದಕ್ಕೆ ಉತ್ತರ 'ಬ್ರಹ್ಮಚಾರಿ' ಸಿನಿಮಾ.
ಬ್ರಹ್ಮಚಾರಿ ಚಿತ್ರಕ್ಕೆ ಮುಹೂರ್ತ ಇಂದು ಬೆಂಗಳೂರಿನ ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ 'ಬ್ರಹ್ಮಚಾರಿ' ಸಿನಿಮಾ ಮುಹೂರ್ತ ನೆರವೇರಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಕ್ಯಾಮರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೊಂದು ಕಾಮಿಡಿ ಸಿನಿಮಾವಾಗಿದ್ದು ಚಿತ್ರದ ಟೈಟಲ್‌ಗೆ '100 ಪರ್ಸೆಂಟ್ ವರ್ಜಿನ್’ ಎನ್ನುವ ಸಬ್ಟೈಟಲ್ ನೀಡಲಾಗಿದೆ.
ಅದಿತಿ ಪ್ರಭುದೇವ, ನೀನಾಸಂ ಸತೀಶ್ ಈ ಹಿಂದೆ 'ಲವ್ ಇನ್ ಮಂಡ್ಯ’ ಚಿತ್ರದಲ್ಲಿ ಒಂದಾಗಿದ್ದ ಸತೀಶ್ ಮತ್ತು ನಿರ್ಮಾಪಕ ಉದಯ್ ಮೆಹ್ತಾ ಜೋಡಿ ಈ ಚಿತ್ರದಲ್ಲಿ ಮತ್ತೆ ಜೊತೆಯಾಗಿದ್ದಾರೆ. ಇನ್ನು 'ಬಾಂಬೆ ಮಿಠಾಯಿ’ ಮತ್ತು 'ಡಬಲ್ ಇಂಜಿನ್’ ನಂತಹ ನಕ್ಕುನಗಿಸಿದ ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ಈ 'ಬ್ರಹ್ಮಚಾರಿ' ಸಿನಿಮಾವನ್ನು ಡೈರೆಕ್ಟ್ ಮಾಡ್ತಿದ್ದಾರೆ. ಸತೀಶ್ಗೆ ಅದಿತಿ ಪ್ರಭುದೇವ ಜೊತೆಯಾಗಿದ್ದಾರೆ.