ಸ್ಯಾಂಡಲ್ವುಡ್ ನ ಬಿಗ್ ಬಜೆಟ್ ಚಿತ್ರ 'ಕುರುಕ್ಷೇತ್ರ' ಬಿಡುಗಡೆಯಾಗಿ ಯಶಸ್ವಿಯಾಗಿ 50 ದಿನ ಪೂರೈಸಿದೆ. ಅಗಸ್ಟ್ 9ರಂದು ರಿಲೀಸಾಗಿದ್ದ ದಚ್ಚು ಸಿನಿಮಾ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ದರ್ಶನ್ ವೃತ್ತಿಜೀವನದಲ್ಲಿ 100 ಕೋಟಿ ರೂಪಾಯಿ ಗಳಿಸಿದ ಸಿನಿಮಾಗಳಲ್ಲಿ ಕುರುಕ್ಷೇತ್ರ ಸಿನಿಮಾ ಎರಡನೆಯದು.
50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಕುರುಕ್ಷೇತ್ರ.. ಶೀಘ್ರದಲ್ಲೇ ಕಾರ್ಯಕ್ರಮ ಆಯೋಜನೆ - ರೆಬಲ್ ಸ್ಟಾರ್ ಅಂಬರೀಶ್
ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಯಶಸ್ವಿ 50 ದಿನಗಳನ್ನು ಪೂರೈಸಿದೆ. ಶೀಘ್ರದಲ್ಲೇ 50 ದಿನಗಳ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.
ಇದಕ್ಕೂ ಮುನ್ನ ದರ್ಶನ್ ನಟಿಸಿದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ 100 ದಿನಗಳನ್ನು ಪೂರೈಸಿ 100 ಕೋಟಿ ರೂಪಾಯಿ ಲಾಭ ಮಾಡಿತ್ತು. ಇದೀಗ ದರ್ಶನ್ 50ನೇ ಸಿನಿಮಾ 'ಕುರುಕ್ಷೇತ್ರ' ರಾಜ್ಯದ 50ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ 100 ಕೋಟಿ ರೂಪಾಯಿ ಕೂಡಾ ಗಳಿಸಿದ್ದು ಚರಿತ್ರೆಯ ಪುಟಗಳನ್ನು ಸೇರಿದೆ. ಇನ್ನು, ಕೀನ್ಯಾದ ಮಸಾಯಿ ಮಾರಾ ಕಾಡಿಗೆ ವೈಲ್ಡ್ ಪೋಟೋಗ್ರಫಿಗಾಗಿ ತೆರಳಿದ್ದ ದರ್ಶನ್ ಬೆಂಗಳೂರಿಗೆ ವಾಪಸಾಗಿದ್ದಾರೆ. ಶೀಘ್ರವೇ ಚಿತ್ರದ 50 ದಿನಗಳ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಕುರುಕ್ಷೇತ್ರ ಸಿನಿಮಾ ಇತಿಹಾಸ ಸೃಷ್ಟಿ ಮಾಡಿರುವುದಕ್ಕೆ ಹಲವಾರು ಕಾರಣಗಳಿವೆ. ಕನ್ನಡ ಸಿನಿಮಾ ಕ್ಷೇತ್ರದ ಹಲವಾರು ಹಿರಿಯ ಕಲಾವಿದರುಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 3ಡಿ ತಂತ್ರಜ್ಞಾನದಲ್ಲಿ ಒಂದು ಪೌರಾಣಿಕ ಸಿನಿಮಾ ಮೂಡಿ ಬಂದಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲು. ದುರ್ಯೋಧನ ಆಗಿ ದರ್ಶನ್ ನಟಿಸಿದ್ದು ಇವರೊಂದಿಗೆ, ರೆಬಲ್ ಸ್ಟಾರ್ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ರವಿಶಂಕರ್, ಶ್ರೀನಿವಾಸಮೂರ್ತಿ, ಶ್ರೀನಾಥ್, ಭಾರತಿ ವಿಷ್ಣುವರ್ಧನ್, ಸ್ನೇಹ, ಮೇಘನಾ ರಾಜ್, ಹರಿಪ್ರಿಯಾ, ರವಿ ಚೇತನ್, ಸೋನು ಸೂದ್ ಸೇರಿ ಹಲವಾರು ಕಲಾವಿದರು ಅಭಿನಯಿಸಿದ ಚಿತ್ರಕ್ಕೆ ಹಿರಿಯ ನಿರ್ದೇಶನ ನಾಗಣ್ಣ ಸಾರಥ್ಯ ವಹಿಸಿದ್ದರು. ರಾಕ್ಲೈನ್ ವೆಂಕಟೇಶ್ ಈ ಚಿತ್ರವನ್ನು ವಿತರಣೆ ಮಾಡಿದ್ದರು. ಜೆ ಕೆ ಭಾರವಿ ಅವರ ಕಥಾ ಸಹಾಯ, ಜಯನನ್ ವಿನ್ಸೆಂಟ್ ಛಾಯಾಗ್ರಹಣ, ವಿ. ಹರಿಕೃಷ್ಣ ಅವರ ಸಂಗೀತ, ಜೋನಿ ಹರ್ಷ ಸಂಕಲನ ಈ ಚಿತ್ರಕ್ಕಿದೆ.