'ಕೆಜಿಎಫ್' ಚಿತ್ರ ಯಶ್ ಅವರಿಗೆ ದೊಡ್ಡ ಬ್ರೇಕ್ ನೀಡ್ತು. ಈ ಚಿತ್ರದ ನಂತರ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರಾದರು. ಈ ಚಿತ್ರದಲ್ಲಿ ಕೆಲಸ ಮಾಡಿದ ನಟ,ನಟಿಯರು, ತಂತ್ರಜ್ಞರಿಗೆ ಕೂಡಾ ಚಿತ್ರದ ನಂತರ ಅನೇಕ ಆಫರ್ ಬಂತು. ಅವರಲ್ಲಿ ಕೃಷ್ಣೋಜಿ ರಾವ್ ಕೂಡಾ ಒಬ್ಬರು.
ಕೃಷ್ಣೋಜಿರಾವ್ ವೃತ್ತಿ ಜೀವನಕ್ಕೆ ಟ್ವಿಸ್ಟ್ ಕೊಟ್ಟ ಕೆಜಿಎಫ್ ಮೂಲತ: ಪಾವಗಡದವರಾದ ಕೃಷ್ಣೋಜಿ ರಾವ್, ಕೆಜಿಎಫ್ನಲ್ಲಿ ನಟಿಸಿದ ನಂತರ ಅವರನ್ನು ಎಲ್ಲರೂ ಗುರುತಿಸುತ್ತಿದ್ದಾರಂತೆ. 'ವಿಲನ್ ತಂಡ ಕೆಲವರನ್ನು ಗುಹೆಯೊಳಗೆ ಕರೆದೊಯ್ದಾಗ ನಾಯಕ ಯಶ್ ಬಂದು ಇವರನ್ನೆಲ್ಲಾ ಕಾಪಾಡುತ್ತಾನೆ'. ಆ ದೃಶ್ಯದಲ್ಲಿ ನಟಿಸಿರುವವರಲ್ಲಿ ಕೃಷ್ಣೋಜಿ ರಾವ್ ಕೂಡಾ ಒಬ್ಬರು. ಇದರಲ್ಲಿ ಅವರದ್ದು ಬಹಳ ಚಿಕ್ಕ ಪಾತ್ರವಾದರೂ ವೃತ್ತಿ ಜೀವನದಲ್ಲಿ ಅವರಿಗೆ ಹೆಸರು ಸಿಕ್ಕಿದಂತೂ ಸತ್ಯ.
ಕೃಷ್ಣೋಜಿ ರಾವ್ 1979ರಲ್ಲಿ ಚಿತ್ರರಂಗಕ್ಕೆ ಬಂದವರು. ಅನಂತ್ ನಾಗ್ ಹಾಗೂ ಶಂಕರ್ನಾಗ್ ನಟಿಸಿರುವ 'ಮಿಂಚಿನ ಓಟ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಇವರು ಕೆಲಸ ಮಾಡಿದ್ದಾರೆ. ಅಲ್ಲಿಂದ ಹಲವಾರು ನಿರ್ದೇಶಕರೊಂದಿಗೆ ಕೃಷ್ಣೋಜಿ ರಾವ್ ಕೆಲಸ ಮಾಡಿ ನಿರ್ದೇಶನದಲ್ಲಿ ಪಳಗಿದ್ದಾರೆ. ಜೊತೆಗೆ ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಅನಂತ್ ನಾಗ್ ಸೇರಿ ಅನೇಕ ನಾಯಕರೊಂದಿಗೆ ಸುಮಾರು 40 ಚಿತ್ರಗಳಲ್ಲಿ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ.
'ಕಾಲೇಜ್ ಸ್ಟೋರಿ' ಚಿತ್ರಕ್ಕೆ ಕೂಡಾ ಕೃಷ್ಣೋಜಿ ರಾವ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಆದರೆ ಈ ಚಿತ್ರ ದೂರದರ್ಶನದಲ್ಲಿ ಬಿಡುಗಡೆ ಆಗಿ ಪ್ರಸಾರವಾಯ್ತೇ ಹೊರತು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ನಟನೆ, ನಿರ್ದೇಶನ ಮಾತ್ರವಲ್ಲದೆ, ಕೃಷ್ಣೋಜಿ ರಾವ್ ಸುಮಾರು 500 ಚಿತ್ರಗಳಿಗೆ ಸೆನ್ಸಾರ್ ಸ್ಕ್ರಿಪ್ಟ್ ಬರೆದಿದ್ದಾರೆ. ನಂತರ 'ಕೆಜಿಎಫ್' ಚಿತ್ರದಲ್ಲಿ ನಟಿಸುವ ಅವಕಾಶ ಇವರಿಗೆ ದೊರೆತಿದೆ.
'ಕೆಜಿಎಫ್' ನಂತರ ಸುಮಾರು 10 ಚಿತ್ರಗಳಿಗೆ ಕೃಷ್ಣೋಜಿ ರಾವ್ ಅವರಿಗೆ ಅವಕಾಶ ದೊರೆತಿದೆ ಎನ್ನಲಾಗಿದೆ. ಈ ಚಿತ್ರಗಳಲ್ಲಿ 'ಮುದುಕನ ಲವ್ ಸ್ಟೋರಿ' ಎಂಬ ಚಿತ್ರದಲ್ಲಿ ಕೃಷ್ಣೋಜಿ ರಾವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಸದ್ಯದಲ್ಲೇ ಸೆಟ್ಟೇರಲಿದೆ. 'ಕೆಜಿಎಫ್ ಚಾಪ್ಟರ್ 2' ರಲ್ಲೂ ಕೃಷ್ಣೋಜಿ ರಾವ್ ನಟಿಸುತ್ತಿದ್ದು ಮಾಸ್ ಸಂಭಾಷಣೆ ಕೂಡಾ ಇದೆಯಂತೆ. 'ನಮ್ಮ ಪ್ರೀತಿಯ ಶಾಲೆ' ಚಿತ್ರದಲ್ಲಿ ಕೂಡಾ ಕೃಷ್ಣೋಜಿ ರಾವ್ ನಟಿಸುತ್ತಿದ್ದಾರೆ.