'ಶ್ಯಾನೆ ಟಾಪ್ ಆಗವ್ಳೇ' ಅಂತ ಅಭಿಮಾನಿಗಳಿಂದ ಕರೆಸಿಕೊಂಡು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಕನ್ನಡದ ಅಪ್ಪಟದ ಹುಡುಗಿ ಅದಿತಿ ಪ್ರಭುದೇವ ಸದ್ಯ ಸ್ಯಾಂಡಲ್ವುಡ್ನಲ್ಲಿ ಉದಯೋನ್ಮುಖ ನಟಿಯಾಗಿ ಮಿಂಚುತ್ತಿದ್ದಾರೆ.
ನಟನೆಗೂ ಸೈ, ಹಸುಗಳ ಕೊಟ್ಟಿಗೆಯಲ್ಲಿ ಕಸ ಎತ್ತಿ, ಹಾಲು ಕರೆಯೋದಿಕ್ಕೂ ಸೈ ಅಂತಿರುವ ಬೆಣ್ಣೆನಗರಿಯ ಸುಂದರಿ ಕಾರ್ಯಕ್ಕೆ ಫ್ಯಾನ್ಸ್ ಪುಲ್ ಫಿದಾ ಆಗಿದ್ದಾರೆ.
ಮೂಲತಃ ದಾವಣಗೆರೆಯವರಾದ ಅದಿತಿ ಪ್ರಭುದೇವ, ಸಿನಿಮಾ ಹೀರೋಯಿನ್ ಆಗಲಿಲ್ಲ ಅಂದಿದ್ದರೆ, ಟೀಚರ್ ಆಗಿ ಕೆಲಸ ಮಾಡ್ತಾ ಇದ್ರಂತೆ. ಕಿರುತೆರೆಯಿಂದ ಕೆರಿಯರ್ ಶುರು ಮಾಡಿದ ಅದಿತಿ, ಅಜೇಯರಾವ್ ನಟನೆಯ 'ಧೈರ್ಯಂ' ಚಿತ್ರದಿಂದ ನಾಯಕಿಯಾಗಿ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ರು. ಅಲ್ಲಿಂದ ಬಜಾರ್, ಸಿಂಗ, ಬ್ರಹ್ಮಾಚಾರಿ,ರಂಗನಾಯಕಿ ಸಿನಿಮಾ ಮೂಲಕ ಕನ್ನಡಾಭಿಮಾನಿಗಳ ಮನ ಗೆದ್ದರು.
ಬೆಣ್ಣೆನಗರಿಯ ಬೆಣ್ಣೆಯಂತಹ ಹುಡುಗಿ ಇವಳು 'ಶ್ಯಾನೆ ಟಾಪ್ ಆಗವಳ್ಳೇ'.. ಸದ್ಯ ತೋತಾಪುರಿ, ಓಲ್ಡ್ ಮಂಕ್, ಒಂಬತ್ತನೇ ದಿಕ್ಕು, ತ್ರಿಬಲ್ ರೈಡಿಂಗ್, ಅದೊಂದಿತ್ತು ಕಾಲ.. ಹೀಗೆ ಒಂದರ ಮೇಲೊಂದು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರೋ ನಟಿ, ಸ್ಟಾರ್ ಪಟ್ಟವನ್ನ ತಲೆಗೆ ಅಂಟಿಸಿಕೊಂಡಿಲ್ಲ.
ಅದಕ್ಕೆ ಸಾಕ್ಷಿ ಎಂಬಂತೆ ಲಾಕ್ಡೌನ್ ಸಮಯದಲ್ಲಿ ಕೊಟ್ಟಿಗೆ ಕ್ಲೀನ್ ಮಾಡಿ, ಹಾಲು ಕರೆದು, ಜೋಳದ ರೊಟ್ಟಿ ತಟ್ಟಿ ಜವಾರಿ ಹುಡ್ಗಿ ಅನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಹೋದರನ ಜೊತೆಗೂಡಿ ಹೊಲಕ್ಕೆ ಹೋಗಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ್ದಾರೆ.
ಸ್ಟಾರ್ ನಟಿಯಾದ್ರೂ ತಾವು ಬೆಳೆದು ಬಂದ ಮನೆಯ ಪರಿಸರಕ್ಕೆ ಸರಾಗವಾಗಿ ಹೊಂದಿಕೊಳ್ಳುವ ಅದಿತಿ ಸಾಮಾನ್ಯರಂತೆ ಹಸುಗಳ ಆರೈಕೆ, ಮನೆ ಕೆಲಸಗಳನ್ನ ಮಾಡಿ ಎಂಜಾಯ್ ಮಾಡಿದ್ದಾರೆ. ಸದ್ಯ ಈ ಅಪರೂಪದ ಕ್ಷಣಗಳನ್ನ ಅದಿತಿ ಪ್ರಭುದೇವ, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಅಭಿಮಾನಿಗಳು ಶ್ಯಾನೆ ಟಾಪ್ ಆಗವ್ಳೇ ಗುರು ಗೌಡ್ತಿ ಅಂತಿದಾರೆ.