ಕೊರೊನಾ ಹೊಡೆತಕ್ಕೆ ಆರ್ಥಿಕ ವ್ಯವಸ್ಥೆ ಪಾತಾಳ ಸೇರಿದೆ. ಎಲ್ಲಾ ಕ್ಷೇತ್ರಗಳು ನಷ್ಟ ಅನುಭವಿಸುತ್ತಿವೆ. ಈ ಸಾಲಿನಲ್ಲಿ ಸಿನಿಮಾ ರಂಗ ಕೂಡಾ ಸೇರಿದೆ. ಪ್ರತಿ ದಿನ ಏನಿಲ್ಲವೆಂದರೂ 10 ಕೋಟಿ ರೂಪಾಯಿಯಷ್ಟು ಲಾಭ ಮಾಡುತ್ತಿದ್ದ ಕನ್ನಡ ಚಿತ್ರರಂಗ ಇದೀಗ ನೂರಾರು ಕೋಟಿ ನಷ್ಟ ಅನುಭವಿಸಿದೆ. ಈ ಸಮಸ್ಯೆ ಎಲ್ಲಾ ಕಳೆದು ಚಿತ್ರರಂಗ ಸಾಮಾನ್ಯ ಸ್ಥಿತಿಗೆ ಬರಬೇಕಾದರೆ ಇನ್ನೆಷ್ಟು ದಿನಗಳು ಕಾಯಬೇಕೋ ಗೊತ್ತಿಲ್ಲ.
ರೊಮ್ಯಾನ್ಸ್, ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ ಸಾಧ್ಯತೆ ಸಿನಿಮಾ ಶೂಟಿಂಗ್ ಯಾವಾಗ ಆರಂಭವಾಗುವುದೋ ಎಂದು ಚಿತ್ರರಂಗದ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ. ವಿಚಿತ್ರ ಎಂದರೆ ಇನ್ಮುಂದೆ ಕನ್ನಡ ಸಿನಿಮಾಗಳಲ್ಲಿ ರೊಮ್ಯಾನ್ಸ್ ಹಾಗೂ ಕಿಸ್ಸಿಂಗ್ ಸೀನ್ಗಳಿಗೆ ಕತ್ತರಿ ಬೀಳುವ ಸಾಧ್ಯತೆಗಳು ಹೆಚ್ಚು ಎನ್ನಲಾಗುತ್ತಿದೆ. ಅಷ್ಟಕ್ಕೂ ಬಾಲಿವುಡ್ ಚಿತ್ರರಂಗಕ್ಕೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ಕಿಸ್ಸಿಂಗ್ ಸಂಸ್ಕೃತಿ ಅಷ್ಟೊಂದು ಇಲ್ಲ. ಈ ದೃಶ್ಯಗಳಿಗೆ ಏಕೆ ಕತ್ತರಿ ಬೀಳುತ್ತದೆ ಎಂದು ತಿಳಿದುಕೊಳ್ಳವ ಮುನ್ನ ಚಂದನವನದಲ್ಲಿ ರೊಮ್ಯಾನ್ಸ್ ಹಾಗು ಕಿಸ್ಸಿಂಗ್ ಸನ್ನಿವೇಶಗಳ ಟ್ರೆಂಡ್ ಶುರುವಾಗಿದ್ದು ಹೇಗೆ ಎಂಬುದನ್ನು ನೋಡೋಣ.
ಕನ್ನಡ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ನೋಡಿದಾಗ, 80ರ ದಶಕದ ನಂತರ ಕನ್ನಡ ಸಿನಿಮಾಗಳಲ್ಲಿ ನಾಯಕ, ನಾಯಕಿ ನಡುವೆ ರೊಮ್ಯಾಂಟಿಕ್ ದೃಶ್ಯಗಳನ್ನು ನಿರ್ದೇಶಕರು ಸ್ಕ್ರಿಪ್ಟ್ನಲ್ಲೇ ಬರೆಯುತ್ತಿದ್ದರಂತೆ. ಈ ಮಾತಿಗೆ ಪೂರಕವಾಗಿ ಇತರ ಸಿನಿಮಾಗಳಿಗಿಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ , ನಟ ಕಾಶಿನಾಥ್ ಮತ್ತು ರವಿಚಂದ್ರನ್ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹಾಗು ಕಿಸ್ಸಿಂಗ್ ಸೀನ್ಗಳು ಹೆಚ್ಚಾಗಿ ಇರುತ್ತಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹಾಗೂ ಕಾಶಿನಾಥ್ ಸಿನಿಮಾಗಳ ಬಹುತೇಕ ಸಿನಿಮಾಗಳಲ್ಲಿ ರೊಮ್ಯಾನ್ಸ್ಗೆ ಹೆಚ್ಚು ಒತ್ತು ಕೊಡಲಾಗುತ್ತಿತ್ತು. ಸಿನಿಮಾಗಳಲ್ಲಿ ಕಿಸ್ಸಿಂಗ್ ಸಂಸ್ಕೃತಿಯನ್ನು ತಂದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. 'ಪ್ರೇಮಲೋಕ' ಸಿನಿಮಾದಲ್ಲಿ ರವಿಚಂದ್ರನ್ ಕಿಸ್ಸಿಂಗ್ ಸನ್ನಿವೇಶಗಳನ್ನು ನೀವು ನೋಡಬಹುದು. ಅಷ್ಟೇ ಅಲ್ಲ ರವಿಚಂದ್ರನ್ ಸಿನಿಮಾಗಳು ಅಂದರೆ ಅಲ್ಲಿ ರೊಮ್ಯಾನ್ಸ್ಗೆ ಹೆಚ್ಚು ಒತ್ತು ಇರುತ್ತೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ.
ಇನ್ನು 'ಓಂ' ಸಿನಿಮಾದಲ್ಲಿ ಶಿವರಾಜ್ಕುಮಾರ್ ಹಾಗೂ ಪ್ರೇಮ ನಡುವೆ ಒಂದು ಕಿಸ್ಸಿಂಗ್ ಸೀನ್ ಇತ್ತು. ಆ ಸಿನಿಮಾದ 'ಶಿವರಾಜ್ಕುಮಾರು ಕಿಸ್ಸಿಗೆ ಢಮಾರು' ಎಂಬ ಹಾಡೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆದರೆ ಈ ಹಾಡು ಆ ಕಾಲದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು ಎನ್ನುವುದು ಗಾಂಧಿನಗರದ ನಿರ್ದೇಶಕರ ಮಾತು. ಇದರ ಜೊತೆಗೆ ಸಂಜನಾ ಗರ್ಲಾನಿ ಹಾಗು ತಿಲಕ್ ಅಭಿನಯದ, 'ಗಂಡ ಹೆಂಡತಿ' ಹಾಗೂ 'ಬಾಯ್ ಫ್ರೆಂಡ್' ಸಿನಿಮಾ, ರೊಮ್ಯಾನ್ಸ್ ಜೊತೆಗೆ ಚುಂಬನದ ದೃಶ್ಯಗಳಿಂದ ತುಂಬಿ ಹೋಗಿತ್ತು. ಈ ಟ್ರೆಂಡ್ ಇಂದಿನ ನಟರಾದ ಉಪೇಂದ್ರ, ಸುದೀಪ್, ದರ್ಶನ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಸೇರಿ ಯುವ ನಟರ ಸಿನಿಮಾಗಳಲ್ಲೂ ಇದೆ.
ಇನ್ನು ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಕಿಸ್ಸಿಂಗ್ ಸೀನ್ಗಳಿಗೆ ಕತ್ತರಿ ಏಕೆ ಬೀಳುತ್ತೆ ಎಂಬ ವಿಚಾರಕ್ಕೆ ಬರುವುದಾದರೆ, ಈಗಾಗಲೇ ಬಾಲಿವುಡ್ನಲ್ಲಿ ಕೆಲವು ನಿರ್ದೇಶಕರು ಈ ಕಿಸ್ಸಿಂಗ್ ಹಾಗೂ ರೊಮ್ಯಾನ್ಸ್ ಸೀನ್ ಗಳಿಗೆ ಕತ್ತರಿ ಹಾಕುವ ಯೋಜನೆಯಲ್ಲಿದ್ದಾರಂತೆ. ಬಾಲಿವುಡ್ ನಿರ್ದೇಶಕ ಶೂಜಿತ್ ಸಿರ್ಕಾರ್ ತಮ್ಮ ಸ್ಕ್ರಿಪ್ಟ್ನಲ್ಲಿ ಸೇರಿಸಿದ್ದ ಕಿಸ್ಸಿಂಗ್ ಹಾಗೂ ರೊಮ್ಯಾನ್ಸ್ ಸೀನ್ಗಳನ್ನು ಸ್ಕ್ರಿಪ್ಟ್ನಿಂದ ತೆಗೆದಿದ್ದಾರಂತೆ. ಇವರು ಮಾತ್ರವಲ್ಲ ಇನ್ನೂ ಕೆಲವು ಬಾಲಿವುಡ್ ನಿರ್ದೇಶಕರು ಕೂಡಾ ಇದೇ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದ ಕನ್ನಡ ನಿರ್ದೇಶಕರು ಕೂಡಾ ಇದೇ ದಾರಿ ಅನುಸರಿಸಬಹುದು ಎನ್ನಲಾಗುತ್ತಿದೆ. ಆದರೂ ಬಾಲಿವುಡ್ಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಈ ಪದ್ಧತಿ ಕಡಿಮೆ ಎನ್ನುವುದು ಸಮಾಧಾನಕರ ವಿಷಯ.
ರೊಮ್ಯಾನ್ಸ್, ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ ಸಾಧ್ಯತೆ