ನಟ ಕಿರಣ್ ರಾಜ್ ಈಗ ಯಶಸ್ಸಿನತ್ತ ಸಾಗುತ್ತಿದ್ದಾರೆ. ಕನ್ನಡತಿ ಧಾರಾವಾಹಿಯ ಹರ್ಷ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು, ಯಶಸ್ಸಿನ ತುತ್ತತುದಿಯಲ್ಲಿದ್ದಾರೆ.
ಕಿರಣ್ ರಾಜ್ ಅವರ ಅಮ್ಮ ಲಲಿತಾ ಸುರೇಶ್ ತಮ್ಮ ಮುದ್ದು ಮಗನಿಗೆ ಕಾಗದವೊಂದನ್ನು ಕಳಿಸಿದ್ದು, ಅದನ್ನು ರೀಲ್ ಅಮ್ಮಮ್ಮ ಓದಿದರು. ಅಮ್ಮ ಬರೆದ ಪತ್ರ ಓದಿ ಭಾವುಕರಾದ ಹರ್ಷ ಅದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದ ಹಾಗೇ ಕಾಗದದಲ್ಲಿ ತಾಯಿ ತನ್ನ ಮಗ ಕೆರಿಯರ್‌ನಲ್ಲಿ ಎತ್ತರಕ್ಕೇರುವುದನ್ನು ಕಂಡು ಸಂತಸಗೊಂಡಿದ್ದು, ತನ್ನ ಭಾವನೆಗಳನ್ನು ಬರೆದುಕೊಂಡಿದ್ದಾರೆ.
ಕಿರಣ್‌ರನ್ನು ಅವರ ಮಗನನ್ನಾಗಿ ಪಡೆಯಲು ಹೇಗೆ ಆಶೀರ್ವದಿಸಲ್ಪಟ್ಟಿದ್ದೇವೆ ಎಂಬುದನ್ನು ಹೇಳಿದ್ದಾರೆ. ಅಲ್ಲದೇ ಮಗನೊಂದಿಗಿರುವ ಭಾವನಾತ್ಮಕ ಸಂಬಂಧದ ಕುರಿತು ಹೇಳಿದ್ದಾರೆ.
ಇದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಿರಣ್ ರಾಜ್ "ಎಂದಿನಂತೆ ಇವತ್ತು ಕೂಡ ನಿಯತ್ತಾಗಿ ಶೂಟಿಂಗ್‌ಗೆ ಬಂದೆ, ಎಲ್ಲರಿಗೂ ಒಂದು ಹಾಯ್ ಹೇಳಿ ಸ್ಮೈಲ್ ಕೊಟ್ಟು ರೆಡಿಯಾದೆ.
ದಿನ ನಾರ್ಮಲ್ ಆಗಿ ಶುರುವಾಗಿದ್ದರೂ ಮನಸಲ್ಲಿ ಏನೋ ಒಂದು ವಿವರಿಸಲಾರದ ಭಾವನೆ ಇತ್ತು.. ಅಷ್ಟರಲ್ಲಿ ನನ್ನ ಆನ್ ಸ್ಕ್ರೀನ್ ಅಮ್ಮ ಅಮ್ಮಮ್ಮ ಬಂದ್ರು ನಗ್ನಗ್ತಾ ಮಾತಾಡ್ಸಿ ಕೈಯಲ್ಲೊಂದು ಲೆಟರ್ ಇಟ್ಟರು.. ಅರೆ ಇದೇನಿದು ಅಂತಾ ಅನಿಸ್ತು.
ಆದ್ರೆ, ಏನಂತ ರಿಯಾಕ್ಟ್ ಮಾಡಬೇಕು ಗೊತ್ತಾಗಲಿಲ್ಲ.. ನಾನೇ ಓದ್ತೀನಿ ಕಣೋ ಕಂದ ಅಂತಾ ಲೆಟರ್ ಓದಕ್ಕೆ ಶುರು ಮಾಡಿದರು. ಪತ್ರ ಓದೋಕೆ ಶುರು ಮಾಡಿದಾಗ ನನ್ನ ಮುಖದಲ್ಲಿದ್ದ ನಗು ಕಣ್ಣಂಚಲಿ ನೀರಾಗಿ ಕೊನೆಯಾಯಿತು.
ನಾ ಸೋತಾಗ ಧೈರ್ಯ ತುಂಬಿದವರು, ನನಗಾಗಿ ದೇವರ ನೆನೆದವರು, ಹರಕೆ ಕಟ್ಟಿದವರು, ಸದಾ ನನ್ನ ಮೇಲೆ ನಂಬಿಕೆ ಇಟ್ಟ ನನ್ನಮ್ಮ ಪ್ರೀತಿಯಿಂದ ಬರೆದಿದ್ದ ಪತ್ರ. ಕಲರ್ಸ್ ಚಾನೆಲ್ ಮುಖೇನ ನನ್ನಮ್ಮ ನನಗೆ ಕಳುಹಿಸಿದ ಸಂದೇಶ ಅದಾಗಿತ್ತು. ತಾಯಿ ದೇವರ ಪ್ರೀತಿಯ ಪತ್ರ ನಿಮಗಾಗಿ," ಎಂದು ಬರೆದುಕೊಂಡಿದ್ದಾರೆ.