ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿರುವ ವಿಕ್ರಾಂತ್ ರೋಣ ಸಿನಿಮಾ ಮುಂದಿನ ತಿಂಗಳು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.
ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಚಿತ್ರ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರ ಶುರುವಾದಾಗಿಂದಲೂ ಬಹುಬೇಡಿಕೆ ಇದೆ. ಈಗ ದಿನ ಕಳೆದಂತೆ ಆ ಬೇಡಿಕೆ ಇನ್ನೂ ಹೆಚ್ಚುತ್ತಿದೆ. ಇದೀಗ ಹೊಸ ಸುದ್ದಿ ಅಂದರೆ, ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಸುದೀಪ್ ಚಿತ್ರಕ್ಕೆ ಬಿಗ್ ಆಫರ್ ಬಂದಿದೆ.
ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಎರಡು ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಆಫರ್ ನೀಡಿರುವುದು ವಿಶೇಷ. ಹಾಗೆ ನೋಡಿದರೆ, ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಬೇಡಿಕೆ ಎನ್ನಲಾಗುತ್ತಿದೆ. ಯಾಕೆಂದರೆ, ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಇದರಿಂದಾಗಿ ಮುಂದಿನ ತಿಂಗಳು ಬಿಡುಗಡೆ ಆಗೋದಕ್ಕೆ ಸಜ್ಜಾಗಿರೋ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ, ನಿರ್ಮಾಪಕ ಜಾಕ್ ಮಂಜು ಈ ಸಿನಿಮಾವನ್ನ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ನಿರ್ಮಾಪಕ ಜಾಕ್ ಮಂಜು ಮತ್ತು ಕಿಚ್ಚ ಸುದೀಪ್ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಮಾಡಲು ಓಟಿಟಿ ಪ್ಲಾಟ್ ಫಾರ್ಮ್ ಸಂಸ್ಥೆಗಳು 100 ಕೋಟಿ ಆಫರ್ ನೀಡಿವೆ ಎನ್ನಲಾಗಿದೆ. ಆದರೆ, ನಿರ್ಮಾಪಕ ಜಾಕ್ ಮಂಜು ಹೇಳುವ ಹಾಗೇ ಎರಡು ಪ್ರತಿಷ್ಠಿತ ಓಟಿಟಿ ಪ್ಲಾಟ್ ಫಾರ್ಮ್‌ಗಳು ದೊಡ್ಡ ಮೊತ್ತಕ್ಕೆ ಆಫರ್ ಕೊಟ್ಟಿರೋದು ನಿಜ. ಆದರೆ, ಆ ಬೇಡಿಕೆಗೆ ಗಮನಹರಿಸಿಲ್ಲ ಅಂತಾರೆ.
ಕಳೆದ ಮೂರು ವರ್ಷಗಳಿಂದಲೂ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್ಟುಗಳನ್ನ ಹಾಕಿ ಈ ಸಿನಿಮಾ ನಿರ್ಮಾಣ ಮಾಡಿದ್ವೀವಿ.ಇದರ ಜೊತೆಗೆ ತ್ರಿಡಿಯಲ್ಲೂ ವಿಕ್ರಾಂತ್ ರೋಣ ಚಿತ್ರವನ್ನ ಮಾಡಲಾಗಿದೆ. ಹೀಗಾಗಿ, ಈ ಚಿತ್ರವನ್ನ ಚಿತ್ರಮಂದಿರದಲ್ಲೇ ನೋಡಬೇಕು.
ಈಗ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಪ್ರೇಕ್ಷಕರ ಅನುಮತಿ ನೋಡಿದರೆ, ಈ ಬೇಡಿಕೆ ಒಪ್ಪಬೇಕಾ ಇಲ್ಲವೋ ಎಂಬ ಗೊಂದಲವಿದೆ. ಇನ್ನು ಸುದೀಪ್ ಅವರು ಕೂಡ ನಾವು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡೋಣ ಅಂತಾ ಹೇಳಿದ್ದಾರೆ.
ಇಷ್ಟೇ ದಿನ ಕಾದಿದ್ದೇವೆ. ಓಟಿಟಿಯಲ್ಲಿ ರಿಲೀಸ್ ಮಾಡೋದು ಬೇಡ ಎಂಬ ಸಲಹೆ ನೀಡಿದ್ದಾರೆ. ಅದೇನೆ ಇರಲಿ, ಓಟಿಟಿಯಲ್ಲಿ ದೊಡ್ಡ ಮೊತ್ತಕ್ಕೆ ಕೇಳುತ್ತಿದ್ದಾರೆ ಎಂಬ ಖುಷಿ ನನಗಿದೆ ಅಂತಾರೆ ನಿರ್ಮಾಪಕ ಜಾಕ್ ಮಂಜು.
ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಡಬ್ ಮಾಡಲಾಗಿದೆ. ಸುಮಾರು 1,500 ಸ್ಕ್ರೀನ್‌ಗಳಲ್ಲಿ ವಿಕ್ರಾಂತ್ ರೋಣ ಚಿತ್ರವನ್ನ ಫೆಬ್ರವರಿ 24ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಆದರೆ, ಅಂದುಕೊಂಡಂತೆ ವಿಕ್ರಾಂತ್ ರೋಣ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆಯಾ ಅನ್ನೋದನ್ನ ಕಾದು ನೋಡಬೇಕಿದೆ.