ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಪೋಷಕ ಕಲಾವಿದರಿಗೆ ಹಾಗು ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಾ ಬಂದಿರುವ ನಟ ಕಿಚ್ಚ ಸುದೀಪ್ ಇದೀಗ ಮತ್ತೊಂದು ಸಮಾಜಮುಖಿ ಕೆಲಸದ ಮೂಲಕ ಅಭಿಮಾನಿಗಳ ಅಚ್ಚುಮೆಚ್ಚಿನ ನಟನಾಗಿದ್ದಾರೆ.
ಕಣ್ಣು ಕಳೆದುಕೊಂಡ ಶಿಕ್ಷಕಿಗೆ ಕಣ್ಣಾದ ಸು'ದೀಪ' ಅಷ್ಟಕ್ಕೂ ಹೆಬ್ಬುಲಿ ಈ ಬಾರಿ ಸಹಾಯ ಮಾಡ್ತಾ ಇರೋದು ಪಾಠ ಹೇಳಿ ಕೊಡುವ ಶಿಕ್ಷಕಿಯೊಬ್ಬರಿಗೆ. ಹೌದು, ತುರುವೇಕೆರೆ ತಾಲೂಕಿನ ನೇತ್ರಾವತಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ರು. ಆದ್ರೆ ಕೊರೊನಾ ಹೊಡೆತಕ್ಕೆ ಸಿಲುಕಿ ಇರುವ ವೃತ್ತಿಯನ್ನ ಕಳೆದುಕೊಂಡಿದ್ರು. ಇದರಿಂದ ಜೀವನ ಸಾಗಿಸೋದಕ್ಕೆ ಮನೆಯ ಹತ್ತಿರ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ರು.
ಆ ಸಮಯದಲ್ಲಿ ಕಟ್ಟಿಗೆ ಕಡಿಯುವ ಕೆಲಸಕ್ಕೆ ಸೇರಿಕೊಂಡರು. ಆದರೆ ಹಣೆಬರಹ ನೋಡಿ, ಕಟ್ಟಿಗೆ ಕಡಿಯುವಾಗ ಕಟ್ಟಿಗೆ ಚೂರು ಕಣ್ಣಿಗೆ ಬಡಿದು ಕಣ್ಣು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು. ಈ ವಿಷಯ ಹೇಗೋ ಕಿಚ್ಚ ಸುದೀಪ್ ಅವರ ಗಮನಕ್ಕೆ ಬಂದಿದೆ. ಕೂಡಲೇ ನೇತ್ರಾವತಿ ಅವರ ಕಷ್ಟಕ್ಕೆ ಸ್ಪಂದಿಸಿರುವ ಕಿಚ್ಚ ಸುದೀಪ್, ಶಿಕ್ಷಕಿ ನೇತ್ರಾವತಿ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು, ರಾಜಾಜಿನಗರದಲ್ಲಿರೋ ಮೋದಿ ಆಸ್ಪತ್ರೆಯಲ್ಲಿ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ.
ಅಷ್ಟೇ ಅಲ್ಲ, ಒಬ್ಬ ಅಣ್ಣನಾಗಿ ನಿನ್ನ ಮುಂದಿನ ಬದುಕಿಗೆ ಸಹಾಯ ಮಾಡ್ತಿನಿ ಅಂತಾ ಹೆಬ್ಬುಲಿ ಭರವಸೆ ಮಾಡಿದ್ದಾರಂತೆ. ಸದ್ಯ ಫ್ಯಾಂಟಮ್ ಸಿನಿಮಾ ಚಿತ್ರೀಕರಣಕ್ಕಾಗಿ, ಹೈದರಾಬಾದ್ ನಲ್ಲಿರೋ ಸುದೀಪ್ ಅವರು ಶಿಕ್ಷಕಿ ನೇತ್ರಾವತಿ ಅವರ ಬದುಕಿಗೆ ದೀಪವಾಗಿದ್ದಾರೆ.