ಬಹುನಿರೀಕ್ಷಿತ 'ಕೋಟಿಗೊಬ್ಬ-3' ಚಿತ್ರವು ಈ ಹಿಂದೆ ಅಂದುಕೊಂಡಂತೆ ಅಕ್ಟೋಬರ್ 14ರಂದು ಆಯುಧ ಪೂಜೆ ದಿನ ತೆರೆಕಾಣಬೇಕಿತ್ತು. ಆದರೆ ಒಂದು ದಿನ ತಡವಾಗಿ ಬಿಡುಗಡೆಯಾಗಿದ್ದು, ಈ ಬಗ್ಗೆ ಚಿತ್ರದ ನಾಯಕ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರ ಬಿಡುಗಡೆ ತಡವಾದ ಬಗ್ಗೆ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ನಟ ಕಿಚ್ಚ ಸುದೀಪ್, ಇದರಲ್ಲಿ ಹಿರಿಯ ವಿತರಕರೊಬ್ಬರ ಕೈವಾಡ ಇದೆ. ಈ ಕುರಿತಂತೆ ನಮ್ಮ ಹತ್ತಿರ ಆಡಿಯೋ ತುಣುಕುಗಳು ಇವೆ. ಅದರ ಮೂಲಕ ಉತ್ತರ ಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ, ನಿರ್ಮಾಪಕ ಸೂರಪ್ಪ ಬಾಬು ಕೂಡ ನಿಗದಿತ ದಿನದಂದು ಚಿತ್ರವು ಬಿಡುಗಡೆಯಾಗದ್ದಕ್ಕೆ ಕೆಲ ವಿತರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಭೂಮಿಕಾ ಥಿಯೇಟರ್ನಲ್ಲಿ ಕೋಟಿಗೊಬ್ಬ-3 ಬಿಡುಗಡೆ ಅವಕಾಶ ನೀಡಬೇಡಿ ಎಂದು ಗಾಂಧಿನಗರದ ಖ್ಯಾತ ವಿತರಕರೊಬ್ಬರು ಇತರ ಕೆಲ ವಿತರಕರಿಗೆ ಫೋನ್ ಕರೆ ಮೂಲಕ ಹೇಳಿದ್ದಾರೆ. ಅವರ ಮಾತಿಗೆ ವಿತರಕರು ಬೆಂಬಲಿಸಿದ್ದರಿಂದ ಅ. 14ರಂದು ಸಿನಿಮಾ ಬಿಡುಗಡೆ ಮಾಡಲು ಆಗಲಿಲ್ಲ ಎಂದು ಸೂರಪ್ಪ ಬಾಬು ಅಸಮಾಧಾನ ಹೊರಹಾಕಿದ್ದಾರೆ.
ನಾನು ಹಾಗೂ ಕೆಲ ವಿತರಕರು ಒಪ್ಪಂದ ಮಾಡಿಕೊಂದ್ದೆವು. ಒಪ್ಪಂದದ ಪ್ರಕಾರ, ಅವರು ನನಗೆ ಹಣ ಕೊಡಬೇಕಾಗಿತ್ತು, ಆದರೆ ಆ ಹಣವನ್ನು ಅವರು ನನಗೆ ನೀಡಲಿಲ್ಲ. ಒಂದು ದಿನ ತಡವಾಗಿ ಚಿತ್ರ ಬಿಡುಗಡೆಯಾಗಿದ್ದಕ್ಕೆ 7-10 ಕೋಟಿ ರೂ.ವರೆಗೂ ನಷ್ಟವಾಗಿದೆ. ಈ ಬಗ್ಗೆ ವಕೀಲರ ಬಳಿ ಚರ್ಚೆ ಮಾಡಿದ್ದು, ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ. ಅವರೆಲ್ಲ ನಷ್ಟ ತುಂಬಿಕೊಡಬೇಕು, ಇಲ್ಲದಿದ್ದರೆ ವಿತರಕರನ್ನು ಸುಮ್ಮನೆ ಬಿಡುವುದಿಲ್ಲ. ಮುಂದೆಯೂ ಕೂಡ ಯಾವುದೇ ನಿರ್ಮಾಪಕರಿಗೆ ಇಂತಹ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಾನೂನಿನ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸರ್ದಾರ್ ಉದಮ್ ಸಿನಿಮಾದಲ್ಲಿನ ವಿಕ್ಕಿ ಕೌಶಲ್ ಅಭಿನಯಕ್ಕೆ ಕತ್ರಿನಾ ಕೈಫ್ ಫಿದಾ!